ADVERTISEMENT

ತೆಲಂಗಾಣ ಸರ್ಕಾರದ ‘ದಲಿತ ಬಂಧು’ನಲ್ಲಿ ಶೇ 30 ಕಮಿಷನ್‌: ನಡ್ಡಾ

ಪಿಟಿಐ
Published 19 ನವೆಂಬರ್ 2023, 13:59 IST
Last Updated 19 ನವೆಂಬರ್ 2023, 13:59 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಹೈದರಾಬಾದ್: ತೆಲಂಗಾಣ ಸರ್ಕಾರದ ‘ದಲಿತ ಬಂಧು’ ಯೋಜನೆಯಲ್ಲಿ ಬಿಆರ್‌ಎಸ್‌ ಶಾಸಕರು ಶೇಕಡ 30ರಷ್ಟು ಕಮಿಷನ್ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೆ. ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರವನ್ನು ಮನೆಗೆ ಕಳುಹಿಸಬೇಕು ಎಂದು ಕರೆ ನೀಡಿದರು. 

ನಾರಾಯಣಪೇಟ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ನಡ್ಡಾ, ‘ಕಾಲೇಶ್ವರಂ ನೀರಾವರಿ ಯೋಜನೆಯು ಕೆಸಿಆರ್ ಅವರಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸಿತು. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು’ ಎಂದರು.

ಮತಗಳಿಗಾಗಿ ರಾವ್ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ನಿರ್ದಿಷ್ಟ ಸಮುದಾಯದ ಮೀಸಲಾತಿಯನ್ನು ಶೇಕಡ 4ರಿಂದ 12ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುವುದರ ಜೊತೆಗೆ ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಿದ್ದಾರೆ. ರಾಜ್ಯದ ದೇವಾಲಯಗಳ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಅವರು ದೂರಿದರು.

ADVERTISEMENT

‘ದಲಿತ ಬಂಧು ಯೋಜನೆಯಲ್ಲಿ ಬಿಆರ್‌ಎಸ್‌ ಶಾಸಕರು ಶೇ 30ರಷ್ಟು ಕಮಿಷನ್ ಪಡೆದಿದ್ದಾರೆಯೇ, ಇಲ್ಲವೇ? ಶಾಸಕರು ಶೇಕಡ 30ರಷ್ಟು ಕಡಿತಗೊಳಿಸುತ್ತಿದ್ದಾರೆ ಎಂದು ನೀವು (ಕೆಸಿಆರ್) ಶಾಸಕರ ಸಭೆಯಲ್ಲಿ ಹೇಳಿಲ್ಲವೇ? ಈ 30 ಪರ್ಸೆಂಟ್ ಕಮಿಷನ್ ಸರ್ಕಾರವನ್ನು ನವೆಂಬರ್ 30ರಂದು ಮನೆಗೆ ಕಳುಹಿಸಬೇಕು ಮತ್ತು ಬಿಜೆಪಿ ಸರ್ಕಾರವನ್ನು ತರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ’ ಎಂದು ನಡ್ಡಾ ಹೇಳಿದರು. ತೆಲಂಗಾಣವು ಶೇಕಡ 8.5ರಷ್ಟು ಹಣದುಬ್ಬರದಿಂದ ತತ್ತರಿಸುತ್ತಿದೆ ಮತ್ತು ಇಂಧನ ಬೆಲೆಗಳು ದೇಶದಲ್ಲೇ ಅತಿ ಹೆಚ್ಚು ಎಂದರು. 

'ದಲಿತ ಬಂಧು' ಬಿಆರ್‌ಎಸ್‌ನ ಪ್ರಮುಖ ಯೋಜನೆಯಾಗಿದ್ದು, ಇದು ಪ್ರತಿ ಫಲಾನುಭವಿಗೆ ಅವರ ಆಯ್ಕೆಯ ಯಾವುದೇ ವ್ಯವಹಾರ ಕೈಗೊಳ್ಳಲು ₹10 ಲಕ್ಷದಷ್ಟು ಆರ್ಥಿಕ ಸಹಾಯ ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.