ADVERTISEMENT

ದೆಹಲಿ: ಕೋವಿಡ್‌ನಿಂದ 32 ಮಕ್ಕಳು ಅನಾಥ

ಪಿಟಿಐ
Published 30 ಮೇ 2021, 5:52 IST
Last Updated 30 ಮೇ 2021, 5:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೆಹಲಿಯಲ್ಲಿ ಕೋವಿಡ್‌ ಸಾಂಕ್ರಾಮಿಕದ ವೇಳೆ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ 32 ಮಕ್ಕಳನ್ನು ದೆಹಲಿಯ ಮಕ್ಕಳ ಹಕ್ಕುಗಳ ಸಮಿತಿಯು ಗುರುತಿಸಿದೆ.

‘ಏಕ ಪೋಷಕರೊಂದಿಗೆ ವಾಸಿಸುತ್ತಿದ್ದ ಇನ್ನೂ 10 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ’ ಎಂದು ದೆಹಲಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ(ಡಿಸಿಪಿಸಿಆರ್‌) ಮುಖ್ಯಸ್ಥ ಅನುರಾಗ್ ಕುಂದು ಅವರು ತಿಳಿಸಿದ್ದಾರೆ.

‘ಎರಡನೇ ಅಲೆಯಲ್ಲಿ 16 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಈ ಮಕ್ಕಳಿಗೆ ವೈದ್ಯಕೀಯ ನೆರವು, ಪಡಿತರ, ಸಮಾಲೋಚನೆ, ರೋಗ ನಿರೋಧಕ ಶಕ್ತಿಯ ಅವಶ್ಯಕತೆ ಇದೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಅವರಿಗೆ ಬೇಕಾದ ಎಲ್ಲಾ ಸಹಾಯವನ್ನು ನಾವು ಒದಗಿಸುತ್ತೇವೆ’ ಎಂದು ಡಿಸಿಪಿಸಿಆರ್‌ ಸದಸ್ಯೆ ರಂಜನಾ ಪ್ರಸಾದ್‌ ಅವರು ತಿಳಿಸಿದರು.

‘ಈ ಸಮೀಕ್ಷೆಯ ಮಾಹಿತಿಯನ್ನು ನಾವು ಸರ್ಕಾರಕ್ಕೆ ನೀಡುತ್ತೇವೆ. ಸಾಂಕ್ರಾಮಿಕದ ವೇಳೆ ಅನಾಥರಾಗಿರುವ ಮಕ್ಕಳಿಗಾಗಿ ಸಹಾಯವಾಣಿ ಸಂಖ್ಯೆಯನ್ನು(+91 9311551393) ಕೂಡ ಆರಂಭಿಸಿದ್ದೇವೆ. ಒಂದು ವೇಳೆ ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದರೆ ಅಥವಾ ಬೇರೆ ಯಾವುದಾದರೂ ಸಮಸ್ಯೆಗಳಿದ್ದರೆ, ಮಕ್ಕಳು ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ನಮಗೆ ಈಗಾಗಲೇ 2,200 ಕ್ಕೂ ಹೆಚ್ಚು ಕರೆಗಳು ಬಂದಿವೆ’ ಎಂದು ಅನುರಾಗ್ ಕುಂದು ಮಾಹಿತಿ ನೀಡಿದರು.

‘ದೆಹಲಿ ಸರ್ಕಾರವು ಇಂತಹ ಮಕ್ಕಳ ಖರ್ಚಿಗಾಗಿ ‍ಪ್ರತಿ ತಿಂಗಳು ₹2500 ನೀಡುವ ಬಗ್ಗೆ ಚಿಂತನೆ ನಡೆಸಿದೆ. ಈ ಪ್ರಸ್ತಾವ ಶೀಘ್ರದಲ್ಲೇ ಸಂಪುಟದ ಅನುಮೋದನೆಗೆ ಬರಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಾಂಕ್ರಾಮಿಕದ ಸಮಯದಲ್ಲಿ ಅನಾಥರಾದ ಮಕ್ಕಳ ಶಿಕ್ಷಣ ಮತ್ತು ಪಾಲನೆ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ’ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇ 14 ರಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.