ADVERTISEMENT

4 ತಿಂಗಳ ಹಸುಳೆ ಮೇಲೆ ಅತ್ಯಾಚಾರ

ಶಿಶುವಿನ ಗುಪ್ತಾಂಗ, ತಲೆಯ ಭಾಗದಲ್ಲಿ ಗಾಯಗಳಾಗಿರುವುದು ಶವ ಪರೀಕ್ಷೆಯಲ್ಲಿ ಪತ್ತೆ

ಪಿಟಿಐ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ದೇಶದ ವಿವಿಧೆಡೆ ಶನಿವಾರ ಆರು ಅತ್ಯಾಚಾರ ಪ್ರಕರಣ ವರದಿಯಾಗಿವೆ. ಈ ಪೈಕಿ ನಾಲ್ಕು ತಿಂಗಳ ಹಸುಳೆ ಮೇಲೆ ಸಂಬಂಧಿಯೇ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ.

ಪೋಷಕರ ಜತೆ ಮಲಗಿದ್ದ ನಾಲ್ಕು ತಿಂಗಳ ಹೆಣ್ಣುಶಿಶುವನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಳಿಕ ಹತ್ಯೆ ಮಾಡಿದ ಅಮಾನವೀಯ ಘಟನೆ ಗುರುವಾರ ರಾತ್ರಿ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಪ್ರಕರಣದ ಸಂಬಂಧ ಶಿಶುವಿನ ತಾಯಿಯ ಸಂಬಂಧಿ ನವೀನ್ ಗಾಡ್ಗೆ (25) ಎಂಬಾತನನ್ನು ಬಂಧಿಸಲಾಗಿದೆ.

ADVERTISEMENT

ಪತ್ನಿಯಿಂದ ದೂರವಾಗಿದ್ದ ನವೀನ್‌, ತನ್ನ ಪತ್ನಿಯೊಂದಿಗೆ ರಾಜಿ ಸಂಧಾನ ನಡೆಸುವಂತೆ ಕೋರಿ ಗುರುವಾರ ರಾತ್ರಿ ಶಿಶುವಿನ ತಾಯಿ ಬಳಿ ಬಂದಿದ್ದ. ಇದಕ್ಕೆ ಆಕೆ ಒಪ್ಪದ ಕಾರಣ ಮುನಿಸಿಕೊಂಡು ತೆರಳಿದ್ದ.

ಬೀದಿ ಬದಿಯ ವ್ಯಾಪಾರಿಗಳಾದ ದಂಪತಿ ರಸ್ತೆ ಬದಿ ಮಲಗಿದ್ದಾಗ ಶಿಶುವನ್ನು ಅಪಹರಿಸಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವನ್ನು ಹೊತ್ತೊಯ್ದು ಸಮೀಪದಲ್ಲಿರುವ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾನೆ. ಬೇಸ್‌ಮೆಂಟ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಶವ ಪತ್ತೆಯಾಗಿದೆ.

ಶಿಶುವಿನ ಗುಪ್ತಾಂಗ ಹಾಗೂ ತಲೆಯ ಭಾಗದಲ್ಲಿ ಗಾಯಗಳಾಗಿವೆ. ಹತ್ಯೆಗೂ ಮೊದಲು ಅತ್ಯಾಚಾರ ಎಸಗಿರಬಹುದು ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ಪೊಲೀಸ್ ಅಧಿಕಾರಿ ಅಮಾನತು
ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದ ಮೇಲೆ ಸರಾಫಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಅಧಿಕಾರಿ ತ್ರಿಲೋಕ್ ಸಿಂಗ್ ವರ್ಖಾಡೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಶಿಶು ನಾಪತ್ತೆಯಾದ ಕುರಿತು ಪೋಷಕರು ಶುಕ್ರವಾರ ಬೆಳಿಗ್ಗೆ ದೂರು ಸಲ್ಲಿಸಲು ಬಂದಾಗ ಮಧ್ಯಾಹ್ನ ಎಫ್‌ಐಆರ್‌ ದಾಖಲಿಸಿಕೊಳ್ಳುವ ವೇಳೆಗೆ ಬನ್ನಿ ಎಂದು ಆತ ಅವರನ್ನು ವಾಪಸ್ ಕಳುಹಿಸಿದ್ದ.

*
ಪ್ರಕರಣ ಖಂಡನೀಯ. ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆರೋಪಿಯನ್ನು ಬಂಧಿಸಲಾಗಿದೆ. ಶೀಘ್ರ ಶಿಕ್ಷೆ ವಿಧಿಸಲಾಗುವುದು.
–ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮುಖ್ಯಮಂತ್ರಿ

*
ವಂಚಿಸಿದ ಕಲಬುರ್ಗಿ ವೈದ್ಯ: ಆರೋಪ
ಕೊಲ್ಲಾಪುರ: ಮದುವೆಯಾಗುವುದಾಗಿ ನಂಬಿಸಿ ಕಲಬುರ್ಗಿಯ ವೈದ್ಯರೊಬ್ಬರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಕ್ರೀಡಾಪಟು ಆರೋಪಿಸಿದ್ದಾರೆ.

33 ವರ್ಷದ ಮಹಿಳೆ ಕಳೆದ ವಾರ ಈ ಕುರಿತು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮದುವೆಯಾಗುವುದಾಗಿ ನಂಬಿಸಿ ಆರೋಪಿ ಎರಡು ವರ್ಷ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ವಂಚಿಸಿದ್ದಾನೆ’ ಎಂದು ಮಹಿಳಾ ಕ್ರೀಡಾಪಟು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಾಗಿ ಹುಡುಕುತ್ತಿ ರುವ ಕೊಲ್ಲಾಪುರ ಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಕಲಬುರ್ಗಿಯ ವೈದ್ಯ ನನ್ನನ್ನು ಭೇಟಿ ಮಾಡಲು ಕೊಲ್ಲಾಪುರಕ್ಕೆ ಬಂದಿದ್ದ ಎಂದು ಮಹಿಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.