ADVERTISEMENT

₹60 ಲಕ್ಷ ಲಂಚ; ಸೂಪರಿಂಡೆಂಟೆಂಟ್  ಸೇರಿ ಮೂವರ ಬಂಧನ

ಉದ್ಯಮಿಗೆ ಕಿರುಕುಳ; ಜಿಎಸ್‌ಟಿ ಅಧಿಕಾರಿಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:53 IST
Last Updated 8 ಸೆಪ್ಟೆಂಬರ್ 2024, 15:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:  ಉದ್ಯಮಿಯೊಬ್ಬರನ್ನು 18 ಗಂಟೆಗಳ ಅಕ್ರಮವಾಗಿ ಬಂಧನದಲ್ಲಿರಿಸಿ, ಒಟ್ಟು ₹60 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದ  ಕೇಂದ್ರಿಯ ಸರಕು ಹಾಗೂ ಸೇವಾ ತೆರಿಗೆ (ಸಿಜಿಎಸ್‌ಟಿ)ಯ ಆರು ಮಂದಿ ಅಧಿಕಾರಿಗಳ ವಿರುದ್ಧ ಕೇಂದ್ರಿಯ ತನಿಖಾ ಅಧಿಕಾರಿಗಳು (ಸಿಬಿಐ) ಪ್ರಕರಣ ದಾಖಲಿಸಿದ್ದಾರೆ.

ಸಿಜಿಎಸ್‌ಟಿಯ ಹೆಚ್ಚುವರಿ ಆಯುಕ್ತ, ಜಂಟಿ ಆಯುಕ್ತ, ನಾಲ್ಕು ಮಂದಿ ಸೂಪರಿಂಡೆಂಟೆಂಟ್  ಹಾಗೂ ಒಬ್ಬರು ಲೆಕ್ಕ ಪರಿಶೋಧಕ (ಸಿ.ಎ) ಹಾಗೂ ಮಧ್ಯವರ್ತಿ ಕೆಲಸ ಮಾಡಿದ್ದ ಖಾಸಗಿ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಒಬ್ಬರು ಸೂಪರಿಂಡೆಂಟೆಂಟ್ , ಖಾಸಗಿ ವ್ಯಕ್ತಿ ಹಾಗೂ ಲೆಕ್ಕ ಪರಿಶೋಧಕರನ್ನು ಬಂಧಿಸಲಾಗಿದ್ದು, ಉಳಿದವರನ್ನು ಬಂಧಿಸುವ ಸಾಧ್ಯತೆಯಿದೆ.

ADVERTISEMENT

ಮುಂಬೈನ ಪಶ್ಚಿಮ ಕಮೀಷನರೇಟ್‌ ವ್ಯಾಪ್ತಿಯಲ್ಲಿ ನಿಯೋಜಿತ ಸೂಪರಿಂಡೆಂಟೆಂಟ್ ಅನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

‘₹60 ಲಕ್ಷ ಲಂಚದ ಪೈಕಿ, ₹20 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯನ್ನು ಬಂಧಿಸಲಾಯಿತು. ಇದಕ್ಕೂ ಮುನ್ನ ₹30 ಲಕ್ಷ ಮೊತ್ತವನ್ನು ಹವಾಲಾ ಮಾರ್ಗದ ಮೂಲಕವೇ ಸಿಜಿಎಸ್‌ಟಿ ಅಧಿಕಾರಿಗಳು ಪಡೆದುಕೊಂಡಿದ್ದರು’ ಎಂದು ಸಿಬಿಐ ಅಧಿಕಾರಿಗಳು ಭಾನುವಾರ ತಿಳಿಸಿದರು.

 ಸಿಬಿಐ ಅಧಿಕಾರಿಗಳಿಗೆ  ಉದ್ಯಮಿ ನೀಡಿದ ದೂರಿನ ಪ್ರಕಾರ, ‘ಸೆ. 4ರ ರಾತ್ರಿ ಸಾಂತಾಕ್ರೂಜ್‌ನಲ್ಲಿರುವ ಸಿಜಿಎಸ್‌ಟಿ  ಕಚೇರಿಗೆ ಭೇಟಿ ನೀಡಿದ್ದೆನು.  ಈ ವೇಳೆ ಅಧಿಕಾರಿಯನ್ನು ಇಡೀ ರಾತ್ರಿ ಕಚೇರಿಯಲ್ಲಿ ಇರಿಸಿಕೊಂಡಿದ್ದರು.  ₹80 ಲಕ್ಷ ಲಂಚ ನೀಡಿದರೆ ಮಾತ್ರ ಬಂಧಿಸುವುದಿಲ್ಲ ಎಂದು ಸೂಪರಿಂಡೆಂಟೆಂಟ್ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹60 ಲಕ್ಷ ಮೊತ್ತ ನೀಡಲು ಒಪ್ಪಿಗೆಯಾಗಿತ್ತು. ಉಳಿದ ಅಧಿಕಾರಿಗಳು ಕೂಡ  ಅವಾಚ್ಯವಾಗಿ ನಿಂದಿಸಿ, ಹಣ ನೀಡುವಂತೆ ಒತ್ತಡ ಹೇರಿದ್ದರು. ನಂತರ ಸಹೋದರನಿಗೆ ಕರೆ ಮಾಡಿ ಹಣ ತಲುಪಿಸುವಂತೆ ಮನವಿ ಮಾಡಿದ್ದೆ. ಸಿಜಿಎಸ್‌ಟಿ ಅಧಿಕಾರಿಗಳಿಗೆ ಮುಂಗಡವಾಗಿ ₹30 ಲಕ್ಷ ಹಣ ನೀಡಿದ ಬಳಿಕವೇ ಸೆ.5ರಂದು ಕಚೇರಿಯಿಂದ ಬಿಡುಗಡೆ ಮಾಡಲಾಗಿತ್ತು’ ಎಂದು ವಿವರಿಸಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆ.10ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. 

‘ಎಫ್‌ಐಆರ್‌ ದಾಖಲಾದ ಅಧಿಕಾರಿಗಳ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.