ADVERTISEMENT

ವ್ಯಭಿಚಾರ: ಪುರುಷರಿಗಷ್ಟೇ ಶಿಕ್ಷೆ ಕಾಯ್ದೆ ಸಂವಿಧಾನ ಪೀಠಕ್ಕೆ

ಪಿಟಿಐ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ನವದೆಹಲಿ: ವ್ಯಭಿಚಾರದಲ್ಲಿ ಪುರುಷನಿಗೆ ಮಾತ್ರ ಶಿಕ್ಷೆ ವಿಧಿಸುವ ಮತ್ತು ಮಹಿಳೆಯನ್ನು ಸಂತ್ರಸ್ತೆ ಎಂದು ಪರಿಗಣಿಸಿ, ಆಕೆಯನ್ನು ಮನ್ನಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497ರ ಪ್ರಸ್ತುತತೆಯ ಪರಿಶೀಲನೆಯನ್ನು ಸಾಂವಿಧಾನಿಕ ಪೀಠಕ್ಕೆ ಸುಪ್ರೀಂ ಕೋರ್ಟ್ ವರ್ಗಾಯಿಸಿದೆ.

‘ಇಂತಹದ್ದೇ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಇಂದಿನ ಸಾಮಾಜಿಕ ಪ್ರಗತಿ, ಲಿಂಗ ಸಮಾನತೆ ಮತ್ತು ಲಿಂಗ ಸೂಕ್ಷ್ಮತೆಯ ದೃಷ್ಟಿಕೋನದಲ್ಲಿ ಮರುಪರಿಶೀಲಿಸುವ ಅವಶ್ಯಕತೆ ಇದೆ. ಹೀಗಾಗಿ ಇದನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠವು ಹೇಳಿದೆ.

ಸೆಕ್ಷನ್ 497ರ ಪ್ರಸ್ತುತತೆಯನ್ನು ಪ್ರಶ್ನಿಸಿ ಜೋಸೆಫ್ ಶಿನೆ ಅರ್ಜಿ ಸಲ್ಲಿಸಿದ್ದರು. ಯಾವುದೇ ಪುರುಷ ಮತ್ತೊಬ್ಬ ಪುರುಷನ ಪತ್ನಿಯ ಜತೆ ದೈಹಿಕ ಸಂಬಂಧ ಇರಿಸಿಕೊಳ್ಳುವುದನ್ನು ಈ ಸೆಕ್ಷನ್ ಅಪರಾಧ ಎಂದು ಪರಿಗಣಿಸುತ್ತದೆ. ಅಪರಾಧಿಗೆ ಗರಿಷ್ಠ ಐದು ವರ್ಷ ಸೆರೆವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಸೆಕ್ಷನ್‌ ಅವಕಾಶ ಮಾಡಿಕೊಡುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.