ADVERTISEMENT

ಗದ್ದಲದ ಅಬ್ಬರಕ್ಕೆ ಕರಗಿದ ಕಲಾಪ, ಸೊರಗಿದ ಚರ್ಚೆ!

ಅಂಗೀಕಾರ ಆಗದ ‘ತ್ರಿವಳಿ ತಲಾಖ್‌ ನಿಷೇಧ’ ಮಸೂದೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಶುಕ್ರವಾರ ರಾಜ್ಯಸಭಾ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು.
ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಶುಕ್ರವಾರ ರಾಜ್ಯಸಭಾ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು.   

ನವದೆಹಲಿ: ಭಾರಿ ನಿರೀಕ್ಷೆಗಳೊಂದಿಗೆ ಡಿ.15ರಂದು ಆರಂಭವಾಗಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದೆ.

ಅಧಿವೇಶನದ ಕೊನೆಯ ದಿನವಾದ ಶುಕ್ರವಾರವೂ ಸದಸ್ಯರ ಗದ್ದಲ ಮತ್ತು ಅಬ್ಬರಗಳ ಮಧ್ಯೆಯೇ ಉಭಯ ಸದನಗಳ ಕಲಾಪಗಳು ಕರಗಿ ಹೋದವು. ಎಷ್ಟೋ ಗಂಭೀರ ವಿಷಯಗಳ ಚರ್ಚೆಗೆ ಅವಕಾಶವೇ ಸಿಗದೆ ಅಧಿವೇಶನ ಮುಗಿದು ಹೋಯಿತು.

ಹಾಗಿದ್ದರೂ, ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸುವ ಮಹತ್ವದ ‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ’ ಲೋಕಸಭೆಯ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. 19 ಖಾಸಗಿ ಮಸೂದೆಗಳಲ್ಲಿ ಒಂದರ ಬಗ್ಗೆ ಮಾತ್ರ ಚರ್ಚೆಗೆ ಅವಕಾಶ ಸಿಕ್ಕಿದೆ.

ADVERTISEMENT

ಕಲಾಪ ಬಲಿ: ಎರಡೂ ಸದನಗಳು 13 ದಿನ ಸೇರಿದ್ದು, ಸದಸ್ಯರ ಪ್ರತಿಭಟನೆ, ದಾಂದಲೆಗೆ ಲೋಕಸಭೆಯ 15 ಗಂಟೆಯ ಕಲಾಪ ಮತ್ತು ರಾಜ್ಯಸಭೆಯ 34 ಗಂಟೆಯ ಕಲಾಪಗಳು ಬಲಿಯಾಗಿವೆ. ಆದರೂ, ಲೋಕಸಭೆಯಲ್ಲಿ ಮಂಡಿಸಲಾದ 16 ಮಸೂದೆಗಳ ಪೈಕಿ 12 ಮತ್ತು ರಾಜ್ಯಸಭೆಯು 9 ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ಹೆಚ್ಚಳ ಮಸೂದೆ, ಕೇಂದ್ರ ಹೆದ್ದಾರಿ ನಿಧಿ ತಿದ್ದುಪಡಿ ಮಸೂದೆ, ಸ್ಥಿರಾಸ್ತಿ ಸ್ವಾಧೀನ ಮಸೂದೆ, ಚೆಕ್‌ ಅಮಾನ್ಯೀಕರಣ ಪ್ರಕರಣಗಳ ವಿಲೇವಾರಿ ವಿಳಂಬಕ್ಕೆ ಕಡಿವಾಣ ಹಾಕುವ ನೆಗೋಷಿಯೇಬಲ್‌ ಇನ್‌ಸ್ಟ್ರುಮೆಂಟ್ಸ್‌ (ತಿದ್ದುಪಡಿ) ಮಸೂದೆಗಳಿಗೆ ಒಪ್ಪಿಗೆ ದೊರೆತಿದೆ.

ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟ ಭರ್ತಿ ಮಾಡಲು ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ತಿದ್ದುಪಡಿ ಮಸೂದೆ, ಹಿಂದುಳಿದ ವರ್ಗಗಳ (ಒಬಿಸಿ) ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

ಆದರೆ, ವಿರೋಧ ಪಕ್ಷಗಳು ಮತ್ತು ವೈದ್ಯರ ಒತ್ತಡಕ್ಕೆ ಮಣಿದ ಸರ್ಕಾರ ಹೊಸದಾಗಿ ವೈದ್ಯಕೀಯ ಆಯೋಗ ಸ್ಥಾಪಿಸಲು ಅವಕಾಶ ನೀಡುವ ‘ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ’ಯನ್ನು ಪುನರ್‌ ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳಿಸಲು ಒಪ್ಪಿಕೊಂಡಿದೆ.

41 ವರದಿ ಸಲ್ಲಿಕೆ: ಲೋಕಸಭೆಯು 61 ಗಂಟೆ 48 ನಿಮಿಷ ಕಾರ್ಯನಿರ್ವಹಿಸಿದ್ದು 280 ಚುಕ್ಕೆ ಪ್ರಶ್ನೆಗಳ ಪೈಕಿ 48 ಪ್ರಶ್ನೆಗಳಿಗೆ ಮೌಖಿಕ ಉತ್ತರ ನೀಡಲಾಗಿದೆ. ಉಳಿದ ಪ್ರಶ್ನೆಗಳಿಗೆ ಲಿಖಿತ ಮಾಹಿತಿ ಒದಗಿಸಲಾಗಿದೆ. ವಿವಿಧ ಸಂಸದೀಯ ಸ್ಥಾಯಿ ಸಮಿತಿಗಳು 41 ವರದಿಗಳನ್ನು ಸಲ್ಲಿಸಿವೆ.

ರಾಜ್ಯಸಭೆ 41 ಗಂಟೆ ಕಾರ್ಯನಿರ್ವಹಿಸಿದ್ದು, ಐದು ದಿನಗಳ ಪ್ರಶ್ನೋತ್ತರ ವೇಳೆಯಲ್ಲಿ ಕೇಳಲಾದ 210 ಚುಕ್ಕೆ ಪ್ರಶ್ನೆಗಳಲ್ಲಿ 46 ಚುಕ್ಕೆ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.

ಸದಸ್ಯರ ವರ್ತೆನೆಗೆ ನಾಯ್ಡು ಕಿಡಿ: ಉಭಯ ಸದನಗಳ ಸದಸ್ಯರ ಗದ್ದಲದಿಂದಾಗಿ ಕಲಾಪಗಳನ್ನು ಹಲವು ಬಾರಿ ಮುಂದೂಡಬೇಕಾಯಿತು.

ಸದಸ್ಯರ ವರ್ತನೆ ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರ ಕೆಂಗಣ್ಣಿಗೆ ಗುರಿಯಾಯಿತು. ಸದಸ್ಯರ ವರ್ತನೆಯಿಂದ ಬೇಸತ್ತ ಅವರು ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು.

‘ಸದಸ್ಯರ ಗದ್ದಲದಿಂದಾಗಿ ಸದನದ ಅಮೂಲ್ಯ ಸಮಯ ವ್ಯರ್ಥವಾಗಿದೆ. ಇದು ದುರ್ದೈವದ ಸಂಗತಿ. ತಮ್ಮ ವರ್ತನೆಯ ಬಗ್ಗೆ ಸದಸ್ಯರು ಗಂಭೀರವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ’ ಎಂದು ಅವರು ಸಲಹೆ ಮಾಡಿದರು.

‘ಆರೋಗ್ಯಕರ ಚರ್ಚೆಗಳು ಪ್ರಜಾಪ್ರಭುತ್ವದ ಜೀವಂತಿಕೆಯ ಲಕ್ಷಣಗಳು. ಆದರೆ, ಈ ರೀತಿಯ ದಾಂದಲೆಗಳು ಅಲ್ಲ. ಸಂಸತ್‌ ರಾಜಕೀಯ ಸಂಸ್ಥೆಯಾದರೂ ಇಲ್ಲಿ ರಾಜಕಾರಣ ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ರಾಹುಲ್‌ ವಿರುದ್ಧ ಹಕ್ಕುಚ್ಯುತಿ: ಶೀಘ್ರ ನಿರ್ಧಾರ’
ನವದೆಹಲಿ:
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ಭೂಪಿಂದರ್‌ ಯಾದವ್‌ ನೀಡಿದ್ದ ಹಕ್ಕುಚ್ಯುತಿ ನೋಟಿಸ್‌ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಸಂಸತ್‌ ಚಳಿಗಾಲ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಶೂನ್ಯವೇಳೆಯಲ್ಲಿ ಸಂಸದ ಯಾದವ್‌, ತಾವು ನೀಡಿದ್ದ ಹಕ್ಕುಚ್ಯುತಿ ನೋಟಿಸ್‌ ಗತಿ ಏನಾಯಿತು ಎಂದು ಪ್ರಶ್ನಿಸಿದರು.

‘ಈ ವಿಷಯ ರಾಜ್ಯಸಭೆಯ ವ್ಯಾಪ್ತಿಗೆ ಬರುವುದಿಲ್ಲ. ಲೋಕಸಭೆಗೆ ಸಂಬಂಧಿಸಿದೆ’ ಎಂದು ನಾಯ್ಡು ಮನವರಿಕೆ ಮಾಡಿದರು.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ವಿರುದ್ಧ ರಾಹುಲ್‌ ಗಾಂಧಿ ಅವರು ಮಾಡಿದ ಟ್ವೀಟ್‌ಗೆ ಸಂಬಂಧಿಸಿದಂತೆ ಭೂಪಿಂದರ್‌ ಯಾದವ್‌ ಡಿ.28ರಂದು ಹಕ್ಕುಚ್ಯುತಿ ನೋಟಿಸ್‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.