ADVERTISEMENT

ಅಣು ವಿಜ್ಞಾನಿ ಬಲದೇವ್‌ ರಾಜ್‌ ನಿಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಬಲದೇವ್ ರಾಜ್‌
ಬಲದೇವ್ ರಾಜ್‌   

ಬೆಂಗಳೂರು: ಖ್ಯಾತ ಅಣು ವಿಜ್ಞಾನಿ ಮತ್ತು ಭಾರತೀಯ ಉನ್ನತ ಅಧ್ಯಯನ ಸಂಸ್ಥೆ (ನಿಯಾಸ್‌) ನಿರ್ದೇಶಕ ಪ್ರೊ. ಬಲದೇವ್‌ ರಾಜ್‌ (70) ಅವರು ಶನಿವಾರ ಪುಣೆಯಲ್ಲಿ ನಿಧನರಾದರು.

ಸಮ್ಮೇಳನವೊಂದರಲ್ಲಿ ಭಾಗವಹಿಸುವುದಕ್ಕಾಗಿ ಅವರು ಪುಣೆಗೆ ತೆರಳಿದ್ದರು.

ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಅವರು 2014ರಲ್ಲಿ ನಿಯಾಸ್‌ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

ADVERTISEMENT

ಕಲ್ಪಾಕಂನ ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಬಲದೇವ್‌ ರಾಜ್‌ ಅವರು ಇಂಧನ, ಸಾಂಸ್ಕೃತಿಕ ಪರಂಪರೆ, ವೈದ್ಯಕೀಯ ತಂತ್ರಜ್ಞಾನ, ನ್ಯಾನೊವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ.

ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ಬಲದೇವ್‌, ವಿವಿಧ ನಿಯತಕಾಲಿಕಗಳಲ್ಲಿ 1000ಕ್ಕೂ ಹೆಚ್ಚು ಶೈಕ್ಷಣಿಕ ಪ್ರಬಂಧ ಬರೆದಿದ್ದಾರೆ. 70ಕ್ಕೂ ಅಧಿಕ ಕೃತಿ ರಚಿಸಿದ್ದಾರೆ.

ಭಾರತೀಯ ಪರಮಾಣು ಸೊಸೈಟಿಯ ಜೀವಮಾನ ಸಾಧನೆ ಪ್ರಶಸ್ತಿ, ಹೋಮಿ ಭಾಭಾ ಚಿನ್ನದ ಪದಕ ಮತ್ತು ನಾಯುದಮ್ಮ ಸ್ಮಾರಕ ಪ್ರಶಸ್ತಿ ಸೇರಿದಂತೆ 100ಕ್ಕೂ ಹೆಚ್ಚು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

‘ಬಲದೇವ್‌ ಸಾರಥ್ಯದಲ್ಲಿ ಬಹು–ವಿಷಯಗಳ ಅಧ್ಯಯನ ಕ್ಷೇತ್ರದಲ್ಲಿ ನಿಯಾಸ್‌ ಹೊಸ ಎತ್ತರಕ್ಕೆ ಏರಿದೆ. ಅವರು ಸಂಸ್ಥೆಯನ್ನು ಸರ್ಕಾರದ ಹತ್ತಿರಕ್ಕೆ ತೆಗೆದುಕೊಂಡು ಹೋಗಿದ್ದು ಮಾತ್ರವಲ್ಲದೇ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸುವಂತೆ ಮಾಡಿದ್ದರು. ಸಂಸ್ಥೆಯಲ್ಲಿ ಬೋಧಕರ ಸಂಖ್ಯೆ ಹೆಚ್ಚಳ ಮತ್ತು ಸಂಶೋಧನೆಗಳಿಗೆ ಅನುದಾನ ಪಡೆಯುವುದರಲ್ಲಿ ಅವರ ನಾಯಕತ್ವ ಪ್ರಮುಖ ‍ಪಾತ್ರ ನಿರ್ವಹಿಸಿದೆ’ ಎಂದು ನಿಯಾಸ್‌ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.