ADVERTISEMENT

ನಾವು ಲವ್ ಜಿಹಾದಿಗಳಲ್ಲ, ಪ್ರೀತಿಯಲ್ಲಿ ನಂಬಿಕೆಯಿಟ್ಟವರು: ಜಿಗ್ನೇಶ್ ಮೆವಾನಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 15:53 IST
Last Updated 9 ಜನವರಿ 2018, 15:53 IST
ಕೃಪೆ: ಎಪಿ
ಕೃಪೆ: ಎಪಿ   

ನವದೆಹಲಿ: ಪೊಲೀಸರ ಅನುಮತಿ ನಿರಾಕರಣೆ ಹೊರತಾಗಿಯಯೂ ದಲಿತ ನೇತಾರ, ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ದೆಹಲಿಯಲ್ಲಿ ಮಂಗಳವಾರ ‘ಯುವ ಹೂಂಕಾರ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕೆ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು  ಭಾರತದ ಸಂವಿಧಾನ ಮತ್ತು ಮನುಸ್ಮೃತಿಯ ಪ್ರತಿಯನ್ನು ನೀಡಿ ಇದರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದು, ಹಲವಾರು ಮಂದಿಯನ್ನು ಬಂಧಿಸಿದ್ದಾರೆ.

ಯುವ ಹೂಂಕಾರ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಜಿಗ್ನೇಶ್, ನಾವು ಭಾರತದ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರಾಗಿದ್ದೇವೆ. ನಾವು ಲವ್ ಜಿಹಾದಿಗಳಲ್ಲ, ಪ್ರೀತಿ ಮತ್ತು ಸ್ನೇಹದ ರೂವಾರಿಗಳಾಗಿದ್ದೇವೆ. ನಾವು ಫೆ,14ರಂದು ವ್ಯಾಲೆಂಟೈನ್ಸ್ ಡೇ ಆಚರಿಸುತ್ತೇವೆ ಎಂದಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ ಜಿಗ್ನೇಶ್ ಪುಣೆಯಲ್ಲಿ ನಡೆದ ಸಂಘರ್ಷಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಿದ್ದು ಇದೇ ಕಾರಣದಿಂದಾಗಿದೆ. ಭ್ರಷ್ಟಾಚಾರ, ಬಡತನ, ನಿರುದ್ಯೋಗ ಮೊದಲಾದ ಪ್ರಧಾನ ಸಮಸ್ಯೆಗಳನ್ನು ನಿರ್ಲಕ್ಷಿಸಿ ಕೇಂದ್ರ ಸರ್ಕಾರ ಲವ್  ಜಿಹಾದ್ , ಹಸು ಮತ್ತು ಘರ್ ವಾಪಸಿ ಬಗ್ಗೆ ಚರ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಮಧ್ಯಾಹ್ನ  1 ಗಂಟೆಗೆ ರ‍್ಯಾಲಿ ಆರಂಭವಾಗಿತ್ತು. ಜಿಗ್ನೇಶ್ ಮೆವಾನಿ ಜತೆ ಜೆಎನ್‍ಯು ವಿದ್ಯಾರ್ಥಿ ನೇತಾರರಾದ ಕನಯ್ಯಾ ಕುಮಾರ್, ಶೆಹಲಾ ರಾಶಿದ್, ಉಮರ್ ಖಾಲಿದ್ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.