ADVERTISEMENT

ನಗರ ವಸತಿ ರಹಿತರಿಗೆ ಆಧಾರ್‌ ನೋಂದಣಿ ಹೇಗೆ: ‘ಸುಪ್ರೀಂ’ ಪ್ರಶ್ನೆ

ಪಿಟಿಐ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

ನವದೆಹಲಿ: ನಗರ ಪ್ರದೇಶದ ವಸತಿ ರಹಿತರ ಆಧಾರ್‌ ನೋಂದಣಿಯನ್ನು ಹೇಗೆ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ.

ದೇಶದಾದ್ಯಂತ ನಗರ ಪ್ರದೇಶಗಳ ವಸತಿ ರಹಿತರಿಗೆ ಆಶ್ರಯ ನೀಡುವುದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅದು ಈ ಪ್ರಶ್ನೆಯನ್ನು ಕೇಳಿದೆ.

‘ವ್ಯಕ್ತಿಯೊಬ್ಬನಿಗೆ ಮನೆ ಇಲ್ಲದಿದ್ದರೆ, ಆಧಾರ್‌ ಕಾರ್ಡ್‌ನಲ್ಲಿ ಆತನನ್ನು ಹೇಗೆ ಗುರುತಿಸಲಾಗುತ್ತದೆ’ ಎಂದು ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಹೆಚ್ಚುವರಿ ಸಾಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ‘ಇಂತಹ ಸಂದರ್ಭದಲ್ಲಿ ಅವರು ಆಧಾರ್‌ ಹೊಂದುವ ಸಾಧ್ಯತೆ ಇಲ್ಲ’ ಎಂದು ಹೇಳಿದರು.

ಇದಕ್ಕೆ, ‘ಆಧಾರ್‌ ಹೊಂದಿಲ್ಲದ ವಸತಿ ರಹಿತರು, ಭಾರತ ಸರ್ಕಾರ ಅಥವಾ ಉತ್ತರ ಪ್ರದೇಶ ಸರ್ಕಾರದ ಪಾಲಿಗೆ ಅಸ್ತಿತ್ವದಲ್ಲಿ ಇರುವುದಿಲ್ಲವೇ ಮತ್ತು ಅವರಿಗೆ ಆಶ್ರಯ ನೀಡಲಾಗುವುದಿಲ್ಲವೇ’ ಎಂದು ನ್ಯಾಯಪೀಠ ಮರು ಪ್ರಶ್ನೆ ಎಸೆಯಿತು.

ಬಳಿಕ ಸ್ಪಷ್ಟನೆ ನೀಡಿದ ಮೆಹ್ತಾ, ‘ಆಧಾರ್‌ ಇಲ್ಲದವರು ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳುವುದು ಸರಿಯಲ್ಲ. ಮತದಾರರ ಗುರುತಿನ ಚೀಟಿಯಂತಹ ವಿಳಾಸ ಹೊಂದಿರುವ ಗುರುತಿನ ದಾಖಲೆಗಳನ್ನು ಅವರು ಹೊಂದಿರುತ್ತಾರೆ’ ಎಂದು ಹೇಳಿದರು.

‘ಪಿಐಎಲ್‌ ಸಲ್ಲಿಕೆಗೆ ಆಧಾರ್‌ ಬೇಕು’

ಚೆನ್ನೈ: ಕಾಲ್ಪನಿಕ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸುವುದನ್ನು ತಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವವರಿಂದ ಇತರ ದಾಖಲೆಗಳೊಂದಿಗೆ ಆಧಾರ್‌ ಸಂಖ್ಯೆಯನ್ನೂ ಪಡೆಯುವಂತೆ ಮದ್ರಾಸ್ ಹೈಕೋರ್ಟ್‌ ತನ್ನ ರಿಜಿಸ್ಟ್ರಿಗೆ ಸೂಚಿಸಿದೆ.

ಕಾಲ್ಪನಿಕ ವ್ಯಕ್ತಿಗಳು ಪಿಐಎಲ್‌ ಸಲ್ಲಿಸಿರುವ ನಿದರ್ಶನಗಳು ತನ್ನ ಗಮನಕ್ಕೆ ಬಂದಿವೆ ಎಂದು ಹೈಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.