ADVERTISEMENT

ಸಿಜೆಐ ನಿವಾಸದ ಮುಂದೆ ಕಾಣಿಸಿಕೊಂಡ ಪ್ರಧಾನಿ ಮೋದಿ ಮುಖ್ಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 6:16 IST
Last Updated 13 ಜನವರಿ 2018, 6:16 IST
ಚಿತ್ರ ಕೃಪೆ – ಎಎನ್‌ಐ ಸುದ್ದಿಸಂಸ್ಥೆ
ಚಿತ್ರ ಕೃಪೆ – ಎಎನ್‌ಐ ಸುದ್ದಿಸಂಸ್ಥೆ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಅವರ ನಿವಾಸದ ಬಳಿ ಶನಿವಾರ ಬೆಳಿಗ್ಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ನೃಪೇಂದ್ರ ಮಿಶ್ರಾ ಅವರು ದೀಪಕ್ ಮಿಶ್ರಾ ನಿವಾಸದ ಬಳಿ ಕಾರಿನಲ್ಲಿ ತೆರಳುತ್ತಿರುವ ಚಿತ್ರವನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಮತ್ತು ನ್ಯಾಯಮೂರ್ತಿಗಳಾದ ರಂಜನ್‌ ಗೊಗೋಯ್‌, ಮದನ್‌ ಬಿ.ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಪತ್ರಿಕಾಗೋಷ್ಠಿ ನಡೆಸಿದ ಮರುದಿನವೇ ಈ ವಿದ್ಯಮಾನ ನಡೆದಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸುಪ್ರೀಂ ಕೋರ್ಟ್‌ನೊಳಗೆ ಹಲವು ಸಮಸ್ಯೆಗಳಿದ್ದು ಇದು ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯನ್ನು ಬಾಧಿಸುವುದರ ಜತೆಗೆ ದೇಶದ ಪ್ರಜಾತಂತ್ರವನ್ನೇ ಅಪಾಯಕ್ಕೆ ಒಡ್ಡಲಿದೆ ಎಂದು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು.

ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಖ್ಯ ನ್ಯಾಯಮೂರ್ತಿ ಮತ್ತು ಅವರ ವಿರುದ್ಧ ಆರೋಪ ಮಾಡಿರುವ ನಾಲ್ವರು ನ್ಯಾಯಮೂರ್ತಿಗಳೇ ಈ ವಿಚಾರವನ್ನು ಬಗೆಹರಿಸಿಕೊಳ್ಳಬೇಕು ಎಂಬುದು ಸರ್ಕಾರದ ನಿಲುವು ಎಂದು ಉನ್ನತ ಮೂಲಗಳು ಶುಕ್ರವಾರ ಹೇಳಿದ್ದವು. ಆದಾಗ್ಯೂ, ಪ್ರಧಾನಿ ಅವರ ಮುಖ್ಯ ಕಾರ್ಯದರ್ಶಿ ಮುಖ್ಯ ನ್ಯಾಯಮೂರ್ತಿ ನಿವಾಸದ ಬಳಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ ಎನ್ನಲಾಗಿದೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.