ADVERTISEMENT

ಸಿ.ಎಂ ನಿವಾಸಕ್ಕೆ ಆಲೂಗಡ್ಡೆ ಎಸೆತ: ಇಬ್ಬರ ಬಂಧನ

ಉತ್ತರಪ್ರದೇಶದಲ್ಲಿ ರೈತರ ವಿಭಿನ್ನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST

ಲಖನೌ: ಆಲೂಗಡ್ಡೆಗೆ ದರ ಕುಸಿತವಾಗಿರುವುದನ್ನು ಪ್ರತಿಭಟಿಸಿ ರೈತರು ಮುಖ್ಯಮಂತ್ರಿ ನಿವಾಸ, ವಿಧಾನಸಭೆ ಕಟ್ಟಡ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭಾರೀ ಪ್ರಮಾಣದಲ್ಲಿ ಆಲೂಗಡ್ಡೆಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಪತ್ನಿ ಡಿಂಪಲ್‌ ಯಾದವ್‌ ಅವರು ಪ್ರತಿನಿಧಿಸುವ ಕನ್ನೌಜ್‌ ಲೋಕಸಭಾ ಕ್ಷೇತ್ರದ ಎಸ್‌ಪಿ ಕಾರ್ಯಕರ್ತರಾದ ಅಂಕಿತ್‌ ಚೌಹಾನ್‌ ಮತ್ತು ಪ್ರದೀಪ್‌ ಕುಮಾರ್‌ ಅವರನ್ನು ಬಂಧಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಕೆಡುಕು ಉಂಟು ಮಾಡುವ ಉದ್ದೇಶದಿಂದ ಪಿತೂರಿ ನಡೆಸಿ ಆಲೂಗಡ್ಡೆ ಎಸೆಯಲಾಗಿದೆ.

ಈ ಕೃತ್ಯದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದಾರೆ. ಶಂಕಿತರನ್ನು ಪತ್ತೆ ಹಚ್ಚಲು ಪೊಲೀಸರು 10,000 ದೂರವಾಣಿ ಕರೆಗಳನ್ನು ಪರಿಶೀಲಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸರ್ಕಾರದ ರೈತವಿರೋಧಿ ನೀತಿಯ ವಿರುದ್ಧ ಪ್ರತಿಭಟಿಸುವುದು ರೈತರ ಹಕ್ಕು ಎಂದು ಅಖಿಲೇಶ್‌ ಹೇಳಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ವಿರೋಧ ಪಕ್ಷದವರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ರೈತರು ಕಿಲೋಗೆ ₹10 ನಿಗದಿಪಡಿಸುವಂತೆ ಒತ್ತಾಯಿಸಿದ್ದರು. ಸರ್ಕಾರ ಕ್ವಿಂಟಾಲ್‌ಗೆ ₹487 ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.