ADVERTISEMENT

ರೈಲ್ವೆ ಲಗೇಜು ಕೊಠಡಿ, ಲಾಕರ್‌ ದರ ದುಬಾರಿ?

ಪಿಟಿಐ
Published 14 ಜನವರಿ 2018, 19:40 IST
Last Updated 14 ಜನವರಿ 2018, 19:40 IST
ರೈಲ್ವೆ ಲಗೇಜು ಕೊಠಡಿ, ಲಾಕರ್‌ ದರ ದುಬಾರಿ?
ರೈಲ್ವೆ ಲಗೇಜು ಕೊಠಡಿ, ಲಾಕರ್‌ ದರ ದುಬಾರಿ?   

ನವದೆಹಲಿ: ರೈಲು ನಿಲ್ದಾಣಗಳಲ್ಲಿ ಲಗೇಜು ಕೊಠಡಿ (ಕ್ಲೋಕ್‌ ರೂಂ) ಹಾಗೂ ಲಾಕರ್‌ ಸೌಲಭ್ಯ ಪಡೆಯಲು ಪ್ರಯಾಣಿಕರು ಸದ್ಯದಲ್ಲೇ ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ. ಮುಕ್ತ ಬಿಡ್ಡಿಂಗ್‌ ವ್ಯವಸ್ಥೆ ಮೂಲಕ ಇವುಗಳ ಬಳಕೆಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗುತ್ತದೆ.

ಈ ಸೇವೆಗಳ ಶುಲ್ಕ ಹೆಚ್ಚಿಸುವ ಅಧಿಕಾರವನ್ನು ಈಗ ರೈಲ್ವೆ ಮಂಡಳಿಯು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ನೀಡಿದೆ. ಸರಕುಗಳ ಮಾಹಿತಿ ದಾಖಲಾತಿಯನ್ನು ಕಂಪ್ಯೂಟರೀಕರಣಗೊಳಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಬಿಡ್ಡಿಂಗ್‌ ಕರೆಯಲು ನಿರ್ಧರಿಸಲಾಗಿದೆ. ಅಲ್ಲದೆ ಬಿಡ್ಡಿಂಗ್‌ ಪಡೆದ ಸಂಸ್ಥೆಗೆ ವಾರ್ಷಿಕ ಶುಲ್ಕ ಏರಿಕೆಗೂ ಅವಕಾಶ ಕಲ್ಪಿಸಲಾಗುತ್ತದೆ.

ಲಾಕರ್‌ನ 24 ಗಂಟೆ ಬಳಕೆಗೆ ರೈಲ್ವೆಯು ಸದ್ಯ ₹20 ಶುಲ್ಕ ವಿಧಿಸುತ್ತಿದೆ. ಇದಾದ ನಂತರದ ಪ್ರತೀ 24 ತಾಸಿಗೆ ₹30ರಂತೆ ಹಣ ಪಾವತಿಸಬೇಕು. ಲಗೇಜು ಕೊಠಡಿಗೆ ದಿನಕ್ಕೆ ₹ 15 ಹಾಗೂ ನಂತರದ ಪ್ರತೀ 24 ಗಂಟೆಗೆ ₹ 20 ಶುಲ್ಕ ವಿಧಿಸಲಾಗುತ್ತಿದೆ. 2013ರಲ್ಲಿ ಕೊನೆಯ ಬಾರಿಗೆ ಶುಲ್ಕ ಪರಿಷ್ಕರಣೆ ಮಾಡಲಾಗಿತ್ತು.

ADVERTISEMENT

‘ಕೆಲವು ನಿಲ್ದಾಣಗಳಲ್ಲಿ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಇವುಗಳ ಸೇವೆ ಬಳಸಿಕೊಳ್ಳುವುದರಿಂದ ಹೆಚ್ಚಿನ ಒತ್ತಡವಿದೆ. ಕೆಲವರು ತಿಂಗಳುಗಟ್ಟಲೆ ಲಗೇಜ್‌ಗಳನ್ನು ಇಲ್ಲೇ ಇಟ್ಟಿರುತ್ತಾರೆ’ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಎ1 ಹಾಗೂ ಎ ವರ್ಗದ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹೊಸ ನೀತಿ ಜಾರಿಗೆ ತರಲು ನಿರ್ಧರಿಸಿದ್ದು, ಇದರಲ್ಲಿ ಯಶಸ್ವಿಯಾದ ಬಿಡ್ಡುದಾರರಿಗೆ ಈ ಸೇವೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.