ADVERTISEMENT

ಲೋಯ ಸಾವು: ಅರ್ಜಿದಾರರಿಗೆ ದಾಖಲೆ ನೀಡಲು ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ಆಗಬೇಕು ಎಂದು ಕೋರಿರುವ ಇಬ್ಬರು ಅರ್ಜಿದಾರರಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡುವಂತೆ ಸುಪ್ರೀಂಕೋರ್ಟ್‌ ಮಹಾರಾಷ್ಟ್ರ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ. ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ಮೋಹನ್‌ ಎಂ. ಶಾಂತನಗೌಡರ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಅರ್ಜಿದಾರರಾದ ತೆಹ್ಸೀನ್‌ ಪೂನಾವಾಲ ಮತ್ತು ಪತ್ರಕರ್ತ ಬಂಡೂರಾಜ್‌ ಸಂಭಾಜಿ ಅವರ ಪರ ವಕೀಲರಿಗೆ ನೀಡಿದರು.

ಅರ್ಜಿದಾರರ ಪರ ವಕೀಲರಾದ ಪಲ್ಲವ್‌ ಸಿಸೋಡಿಯಾ ಮತ್ತು ವರೀಂದರ್‌ ಕುಮಾರ್‌ ಶರ್ಮಾ ಅವರು, ‘ಲೋಯ ಸಾವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನಾವು ಪರಿಶೀಲಿಸಬೇಕಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

‘ಕೆಲವು ದಾಖಲೆಗಳು ಅತ್ಯಂತ ಗೋಪ್ಯವಾಗಿದ್ದು, ಯಾವುದೇ ಕಾರಣಕ್ಕೂ ಅವುಗಳನ್ನು ಬಹಿರಂಗಪಡಿಸಬಾರದು ಎಂಬ ಷರತ್ತಿನ ಮೇಲೆ ಅರ್ಜಿದಾರರಿಗೆ ನೀಡಬಹುದಾಗಿದೆ’ ಎಂದು ಸಾಳ್ವೆ ನ್ಯಾಯಪೀಠಕ್ಕೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಅರ್ಜಿದಾರರು ಎಲ್ಲ ವಿಷಯಗಳನ್ನೂ ತಿಳಿದಿರಬೇಕು’ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ವಾರದ ಮಟ್ಟಿಗೆ ಮುಂದೂಡಿದೆ. ಮುಂದಿನ ವಿಚಾರಣೆ ದಿನಾಂಕವನ್ನು ಅದು ನಿಗದಿಪಡಿಸಿಲ್ಲ.

ಈ ಪ್ರಕರಣವನ್ನು ಅರುಣ್‌ ಮಿಶ್ರಾ ನೇತೃತ್ವದ ಪೀಠಕ್ಕೆ ಹಂಚಿಕೆ ಮಾಡಿದ್ದು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಮುಖ್ಯ ನ್ಯಾಯಮೂರ್ತಿ ವಿರುದ್ಧ ಸಾರ್ವಜನಿಕವಾಗಿ ಅತೃಪ್ತಿ ಹೊರ ಹಾಕುವ ಸಂದರ್ಭದಲ್ಲಿ ನಾಲ್ವರು ನ್ಯಾಯಮೂರ್ತಿಗಳು ಲೋಯ ಸಾವಿನ ಪ್ರಕರಣವನ್ನೂ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.