ADVERTISEMENT

ಮುಂಬೈಗೆ ಬಂದ ಮೊಶೆಗೆ ಖುಷಿಯೋ ಖುಷಿ

ಇಂದು ಗುಜರಾತ್‌ನಲ್ಲಿ ಮೋದಿಯಿಂದ ಭವ್ಯ ಸ್ವಾಗತ

ಪಿಟಿಐ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ವಿಶ್ವವಿಖ್ಯಾತ ತಾಜ್‌ಮಹಲ್‌ಗೆ ಮಂಗಳವಾರ ಭೇಟಿ ನೀಡಿದ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಪ್ರೇಮಸೌಧದ ಮುಂದೆ ಛಾಯಾಚಿತ್ರಕ್ಕೆ ವಿಶಿಷ್ಟ ಪೋಸ್‌ ನೀಡಿದರು –ಪಿಟಿಐ ಚಿತ್ರ  ಜ್‌
ವಿಶ್ವವಿಖ್ಯಾತ ತಾಜ್‌ಮಹಲ್‌ಗೆ ಮಂಗಳವಾರ ಭೇಟಿ ನೀಡಿದ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಪ್ರೇಮಸೌಧದ ಮುಂದೆ ಛಾಯಾಚಿತ್ರಕ್ಕೆ ವಿಶಿಷ್ಟ ಪೋಸ್‌ ನೀಡಿದರು –ಪಿಟಿಐ ಚಿತ್ರ ಜ್‌   

ಮುಂಬೈ: 26/11ರ ಮುಂಬೈ ದಾಳಿಯಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದ ಇಸ್ರೇಲ್‌ ಬಾಲಕ ಮೊಶೆ ಹೋಲ್ಟ್ಜ್‌ಬರ್ಗ್‌, ಒಂಬತ್ತು ವರ್ಷಗಳ ನಂತರ ಮಂಗಳವಾರ ಮುಂಬೈಗೆ ಬಂದಿಳಿದಿದ್ದಾನೆ.

ಬೆಳಿಗ್ಗೆ ಎಂಟು ಗಂಟೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ, ‘ಶಾಲೋಮ್‌... ಬಹುತ್‌ ಖುಷಿ’ (ತುಂಬಾ ಖುಷಿಯಾಗಿದೆ) ಎಂದು ಮೊಶೆ ಹಿಂದಿಯಲ್ಲಿ ಹೇಳಿದ್ದಾನೆ.

ಮೊಶೆಗೆ ಈಗ 11ರ ಹರೆಯ. ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ ನಡೆಸಿದ್ದಾಗ ಆತ ಎರಡು ವರ್ಷದ ಕಂದನಾಗಿದ್ದ.

ADVERTISEMENT

2008ರ ನವೆಂಬರ್‌ 26ರಂದು ನಾರಿಮನ್‌ ಹೌಸ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾಗ ಮೊಶೆ ಅಪ್ಪ ಗೇವ್ರಿಯಲ್‌ ಮತ್ತು ತಾಯಿ ರಿವ್ಕಾ ಹೋಲ್ಟ್ಜ್‌ಬರ್ಗ್‌ ಸೇರಿ ಆರು ಮಂದಿ ಮೃತಪಟ್ಟಿದ್ದರು.

ಮೊಶೆಯನ್ನು ಭಾರತೀಯ ದಾದಿ ಸಾಂಡ್ರಾ ಸಾಮ್ಯುಯೆಲ್ಸ್‌ ರಕ್ಷಿಸಿದ್ದರು. ಈಗ ಅವನು ಅಜ್ಜ ಅಜ್ಜಿಯೊಂದಿಗೆ ಇಸ್ರೇಲ್‌ನಲ್ಲಿ ನೆಲೆಸಿದ್ದಾನೆ.

ಮುಂಬೈಗೆ ಬಂದಿಳಿದ ಮೊಶೆ, ನಾರಿಮನ್‌ ಹೌಸ್‌ಗೆ ಭೇಟಿ ನೀಡಿದ. ಅಲ್ಲಿ ಇಸ್ರೇಲಿ ಶೈಲಿಯ ಆಹಾರವನ್ನೂ ಸೇವಿಸಿದ. ಅವನ ಅಜ್ಜ ಅಜ್ಜಿ, ಇಬ್ಬರು ಚಿಕ್ಕಪ್ಪಂದಿರು ಮತ್ತು ಸಾಂಡ್ರಾ ಜೊತೆಗಿದ್ದರು.

ಗುರುವಾರ ನಾರಿಮನ್‌ ಹೌಸ್‌ನಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು 26/11 ದಾಳಿ ಸಂತ್ರಸ್ತರ ಸ್ಮಾರಕವನ್ನು ಅನಾವರಣ ಮಾಡಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಮೊಶೆಯೂ ಭಾಗವಹಿಸಲಿದ್ದಾನೆ.

‘ಮೊಶೆಗೆ ಈ ಭೇಟಿ ಭಾವನಾತ್ಮಕ ಅನುಭವ ನೀಡಿದೆ’ ಎಂದು ಅವನ ಅಜ್ಜ ಶಿಮೊನ್‌ ರೋಸನ್‌ಬರ್ಗ್‌ ಹೇಳಿದ್ದಾರೆ.

ಭೇಟಿ ಸಂದರ್ಭದಲ್ಲಿ ನಾರಿಮನ್‌ ಹೌಸ್‌ ಸುತ್ತ ಯಹೂದಿಗಳು, ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮದವರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

ಚಿತ್ರ ಸೆರೆಹಿಡಿಯಲು ಮಾಧ್ಯಮದ ಛಾಯಾಗ್ರಾಹಕರು ಸುತ್ತುವರೆದಿದ್ದರಿಂದ ಮೊಶೆ ಸ್ವಲ್ಪ ಹೆದರಿದಂತೆ ಕಂಡು ಬಂತು.

‘ಇಸ್ಲಾಂ ಮೂಲಭೂತವಾದದ ಸವಾಲು ಹತ್ತಿಕ್ಕಲು ಮೈತ್ರಿ ಮುಖ್ಯ’

ನವದೆಹಲಿ: ಇಸ್ಲಾಂ ಮೂಲಭೂತವಾದ ಮತ್ತು ಭಯೋತ್ಪಾದಕರು ಒಡ್ಡುತ್ತಿರುವ ಸವಾಲುಗಳನ್ನು ಹತ್ತಿಕ್ಕಲು ಭಾರತ, ಇಸ್ರೇಲ್‌ನಂತಹ ಪ್ರಜಾಪ್ರಭುತ್ವ ರಾಷ್ಟ್ರಗಳು ಮೈತ್ರಿಯನ್ನು ಬಲಪಡಿಸುವುದು ಅತ್ಯಂತ ಮುಖ್ಯ  ಎಂದು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಪ್ರತಿಪಾದಿಸಿದ್ದಾರೆ.

‘ನಮ್ಮ ಜೀವನ ಶೈಲಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಆಧುನಿಕತೆ ಮತ್ತು ಹೊಸ ಹೊಸ ಆವಿಷ್ಕಾರಗಳಿಗಾಗಿ ನಮ್ಮಲ್ಲಿರುವ ತುಡಿತಕ್ಕೂ ಸವಾಲು ಎದುರಾಗುತ್ತಿದೆ. ಇದು ಇಡೀ ಅಂತರರಾಷ್ಟ್ರೀಯ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಬಹುದು’ ಎಂದು ರೈಸೀನಾ ಸಂವಾದದ ಉದ್ಘಾಟನಾ ಸಮಾರಂಭದಲ್ಲಿ ಅವರು ಹೇಳಿದ್ದಾರೆ.

ರೈಸೀನಾ ಸಂವಾದವು ವಾರ್ಷಿಕ ಕಾರ್ಯಕ್ರಮವಾಗಿದ್ದು, ಚಿಂತಕರ ಚಾವಡಿಯಾದ ಅಬ್ಸರ್ವರ್‌ ರಿಸರ್ಚ್‌ ಫೌಂಡೇಷನ್‌ ಸಹಯೋಗದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದನ್ನು ಆಯೋಜಿಸುತ್ತದೆ. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಭಿಕರಾಗಿ ಭಾಗವಹಿಸಿದ್ದರು.

ಇಂದು ಗುಜರಾತ್‌ನಲ್ಲಿ ಆತಿಥ್ಯ: ಭಾರತಕ್ಕೆ ಆರು ದಿನಗಳ ಪ್ರವಾಸಕ್ಕಾಗಿ ಬಂದಿರುವ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರಿಗೆ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಬುಧವಾರ ಭವ್ಯ ಆತಿಥ್ಯ ನೀಡಲಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಅವರು ಹೊರದೇಶಗಳ ಮುಖ್ಯಸ್ಥರಿಗೆ ತವರು ನೆಲದಲ್ಲಿ ಅದ್ಧೂರಿ ಸ್ವಾಗತ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಮೊದಲು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರಿಗೆ ಭರ್ಜರಿ ಆತಿಥ್ಯ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.