ADVERTISEMENT

ಬಳಕೆ ಹಂತದ ಮೊದಲ ಪರೀಕ್ಷೆ ಯಶಸ್ನಿ: ಗುರಿ ಭೇದಿಸಿದ ‘ಅಗ್ನಿ–5’ ಕ್ಷಿಪಣಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:25 IST
Last Updated 18 ಜನವರಿ 2018, 19:25 IST
ಬಳಕೆ ಹಂತದ ಮೊದಲ ಪರೀಕ್ಷೆ ಯಶಸ್ನಿ: ಗುರಿ ಭೇದಿಸಿದ ‘ಅಗ್ನಿ–5’ ಕ್ಷಿಪಣಿ
ಬಳಕೆ ಹಂತದ ಮೊದಲ ಪರೀಕ್ಷೆ ಯಶಸ್ನಿ: ಗುರಿ ಭೇದಿಸಿದ ‘ಅಗ್ನಿ–5’ ಕ್ಷಿಪಣಿ   

ನವದೆಹಲಿ: ಪಾಕಿಸ್ತಾನ, ಚೀನಾ ಸೇರಿದಂತೆ ಏಷ್ಯಾ ಖಂಡದ ಎಲ್ಲ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವಿರುವ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ‘ಅಗ್ನಿ–5’ ಖಂಡಾಂತರ ಕ್ಷಿಪಣಿಯ ಪರೀಕ್ಷೆ ಮತ್ತೆ ಯಶಸ್ವಿಯಾಗಿದೆ.

‘ರೇಡಾರ್‌ಗಳು, ನಿಗಾ ವ್ಯವಸ್ಥೆಯ ಮೂಲಕ ಕ್ಷಿಪಣಿಯ ಚಲನೆಯ ಪಥದ ಮೇಲೆ ನಿಗಾ ಇಡುವುದರ ಜೊತೆಗೆ ಮೇಲ್ವಿಚಾರಣೆಯನ್ನೂ ನಡೆಸಲಾಗಿತ್ತು. ಕ್ಷಿಪಣಿಯು ಕರಾರುವಾಕ್ಕಾಗಿ ತನ್ನ ಗುರಿಯನ್ನು ನಾಶ ಮಾಡಿದೆ. ದೇಶದ ಸ್ವದೇಶಿ ನಿರ್ಮಿತ ಕ್ಷಿಪಣಿಗಳ ಸಾಮರ್ಥ್ಯಗಳನ್ನು ಈ ಪರೀಕ್ಷೆ ಮತ್ತೆ ಸಾಬೀತು ಪಡಿಸಿದೆ. ನಮ್ಮ ಪ್ರತಿರೋಧ ಶಕ್ತಿಯನ್ನು ಇದು ಮತ್ತಷ್ಟು ಬಲಪಡಿಸಿದೆ’ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಒಡಿಶಾ ಕರಾವಳಿಯಲ್ಲಿನ ಅಬ್ದುಲ್‌ ಕಲಾಂ ದ್ವೀಪದ ಇಂಟಗ್ರೇಟೆಡ್‌ ಟೆಸ್ಟ್‌ ರೇಂಜ್‌ನಲ್ಲಿ (ಐಟಿಆರ್‌) ಸಂಚಾರಿ ಕ್ಯಾನಿಸ್ಟರ್‌ (ಮುಚ್ಚಿದ ಕೊಳವೆ) ಉಡಾವಣಾ ವಾಹನದಿಂದ ಗುರುವಾರ ಬೆಳಗ್ಗೆ 9.53ರ ಸುಮಾರಿಗೆ ಕ್ಷಿ‍ಪಣಿಯನ್ನು ಉಡಾವಣೆ ಮಾಡಲಾಯಿತು.

ADVERTISEMENT

ಬಳಕೆಯ ಹಂತದಲ್ಲಿ ನಡೆದ ‘ಅಗ್ನಿ–5’ರ ಮೊದಲ ಪರೀಕ್ಷಾರ್ಥ ಪ್ರಯೋಗ ಇದು. ಇದಕ್ಕೂ ಮೊದಲು, ಕ್ಷಿಪಣಿಯ ಅಭಿವೃದ್ಧಿ ಹಂತದಲ್ಲಿ ನಾಲ್ಕು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲವೂ ಯಶಸ್ವಿಯಾಗಿದ್ದವು.

ಪರೀಕ್ಷೆ ವೇಳೆ ಹಿರಿಯ ಸೇನಾಧಿಕಾರಿಗಳು ಉಪಸ್ಥಿತರಿದ್ದರು.

‘ಅಗ್ನಿ–5’ ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಂಡ ನಂತರ ಅದು ಸೇನೆಯ ಯುದ್ಧತಂತ್ರ ಘಟಕದ (ಎಸ್‌ಎಫ್‌ಸಿ) ನಿಯಂತ್ರಣದಲ್ಲಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.