ADVERTISEMENT

ಹರಿಯಾಣ: ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ ದ್ವಿತೀಯ ಪಿಯು ವಿದ್ಯಾರ್ಥಿ

ಏಜೆನ್ಸೀಸ್
Published 20 ಜನವರಿ 2018, 11:38 IST
Last Updated 20 ಜನವರಿ 2018, 11:38 IST
ಹತ್ಯೆಯಾದ ರಿತು ಚಬ್ರಾ
ಹತ್ಯೆಯಾದ ರಿತು ಚಬ್ರಾ   

ಹರಿಯಾಣ: ಇಲ್ಲಿನ ಯಮುನನಗರದ ಶಾಲೆಯೊಂದರಲ್ಲಿ ಪ್ರಾಂಶುಪಾಲರನ್ನು ದ್ವಿತೀಯ ಪಿಯು ವಿದ್ಯಾರ್ಥಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

‘ದ್ವಿತೀಯ ಪಿಯು(ವಾಣಿಜ್ಯ ವಿಭಾಗ) ವಿದ್ಯಾರ್ಥಿ ತಮ್ಮ ತಂದೆಯ ಪರವಾನಗಿ ಹೊಂದಿರುವ ಬಂದೂಕನ್ನು ಬಳಸಿ ಪ್ರಾಂಶುಪಾಲರಾದ ರಿತು ಚಬ್ರಾ ಅವರನ್ನು ಶಾಲೆಯ ಅವರ ಕೊಠಡಿಯಲ್ಲೇ ಗುಂಡು ಹರಿಸಿ ಹತ್ಯೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆ ಬಳಿಕ ಚಬ್ರಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ವಿದ್ಯಾರ್ಥಿ ಹದಿನೈದು ದಿನಗಳಿಂದ ತರಗತಿಗಳಿಗೆ ಹಾಜರಾಗದೇ ಇತರೆ ಹೋರಾಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ಶನಿವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದ ವಿದ್ಯಾರ್ಥಿ ಪ್ರಾಂಶುಪಾಲರನ್ನು ಭೇಟಿಯಾಗಬೇಕು ಎಂದು ಹೇಳಿದ್ದ. ಬಳಿಕ ನೇರವಾಗಿ ಪ್ರಾಂಶುಪಾಲರ ಕೊಠಡಿಗೆ ಹೋಗಿ ಬಂದೂಕಿನಿಂದ ಗುಂಡು ಹರಿಸಿದ್ದಾನೆ’ ಎಂದು ಅವರು ವಿವರ ನೀಡಿದ್ದಾರೆ.

ಶಾಲೆಯ ಜವಾನ ಸೇರಿದಂತೆ ಆರು ಮಂದಿ ಸಿಬ್ಬಂದಿ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಮುನಗರ ಪೊಲೀಸ್‌ ಅಧೀಕ್ಷಕ ರಾಜೇಶ್‌ ಕಲಿಯಾ ‘ವಿದ್ಯಾರ್ಥಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿ ತಂದೆ ‘ಪ್ರಾಪರ್ಟಿ ಡೀಲರ್‌’ ಆಗಿ ಕೆಲಸ ಮಾಡುತ್ತಿದ್ದು, ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.