ADVERTISEMENT

ಎಬಿವಿಪಿ ಕಾರ್ಯಕರ್ತನ ಹತ್ಯೆ: ಕಣ್ಣೂರು ಬಂದ್‌

ಎಸ್‌ಡಿಪಿಐ ನಿಷೇಧಕ್ಕೆ ಬಿಜೆಪಿ ಆಗ್ರಹ

ಪಿಟಿಐ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಎಬಿವಿಪಿ ಕಾರ್ಯಕರ್ತನ ಹತ್ಯೆ: ಕಣ್ಣೂರು ಬಂದ್‌
ಎಬಿವಿಪಿ ಕಾರ್ಯಕರ್ತನ ಹತ್ಯೆ: ಕಣ್ಣೂರು ಬಂದ್‌   

ಕಣ್ಣೂರು (ಕೇರಳ): ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯನ ಹತ್ಯೆ ಖಂಡಿಸಿ ಬಿಜೆಪಿ  ಕರೆ ನೀಡಿದ ಬಂದ್‌ ಸಂದರ್ಭ ಜಿಲ್ಲೆಯಲ್ಲಿ ಶನಿವಾರ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಬಿವಿಪಿ ಸದಸ್ಯ ಶ್ಯಾಂ ಪ್ರಸಾದ್‌ ಶುಕ್ರವಾರ ಬೈಕ್‌ನಲ್ಲಿ ಕೂತುಪರಂಬದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಮೂವರ ಗ್ಯಾಂಗ್‌ ಅವರನ್ನು ಇರಿದು ಹತ್ಯೆ ಮಾಡಿದೆ.

ಈ ಹತ್ಯೆಗೆ ಸಂಬಂಧಿಸಿದಂತೆ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೆರವೂರು ಸಿಪಿಐ ಕುಟ್ಟಿಕೃಷ್ಣನ್‌ ತಿಳಿಸಿದ್ದಾರೆ.

ADVERTISEMENT

ಈ ಪ್ರದೇಶದಲ್ಲಿ ಕಳೆದವಾರ ಎಸ್‌ಡಿಪಿಐ ಮತ್ತು ಬಿಜೆಪಿ– ಆರ್‌ಎಸ್‌ಎಸ್‌ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯ ಮುಂದುವರಿದ ಭಾಗ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಎಸ್‌ಡಿಪಿಐ ನಿಷೇಧಕ್ಕೆ ಆಗ್ರಹ: ಎಬಿವಿಪಿ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಡಿಪಿಐನ ನಾಲ್ವರನ್ನು ಬಂಧಿಸಿದ ಬೆನ್ನಲ್ಲೇ  ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜಕೀಯ ಘಟಕವಾಗಿರುವ ಈ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವ ಬೇಡಿಕೆಯನ್ನು ಬಿಜೆಪಿ ಪುನರುಚ್ಚರಿಸಿದೆ.

ಎಸ್‌ಡಿಪಿಐನಂತರ ಪಕ್ಷಗಳನ್ನು ನಿಷೇಧಿಸಬೇಕು. ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನಂತರ ಪಕ್ಷಗಳು ಇಂತಹ ಬೇಡಿಕೆಯನ್ನು ಮುಂದಿಟ್ಟಿವೆ ಎಂದು ಕೇರಳ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕುಮ್ಮನಮ್ಮ ರಾಜಶೇಖರನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.