ADVERTISEMENT

ಎತ್ತರ ಹೆಚ್ಚಿಸುವ ನಕಲಿ ಔಷಧ ಸೇವನೆ, ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ನಜೀರ್
ನಜೀರ್   

ಹೈದರಾಬಾದ್: ದೂರದರ್ಶನದಲ್ಲಿ ಬಂದ ಜಾಹೀರಾತಿಗೆ ಮಾರು ಹೋಗಿ ಎತ್ತರ ಹೆಚ್ಚಿಸಿಕೊಳ್ಳಲು ಸೇವಿಸಿದ್ದ ಔಷಧದಿಂದಾಗಿ ವನಪರ್ತಿ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.

ದೂರದರ್ಶನದ ಟೆಲಿ ಮಾರ್ಕೆಟಿಂಗ್ ಜಾಹೀರಾತು ನೋಡಿ, ಔಷಧ ಸೇವಿಸಿದ್ದ ಖಾಜಾ ನಜೀರ್ ಅಹ್ಮದ್ (17) ಮೃತಪಟ್ಟ ಯುವಕ. ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾದ ಈತ ಮೆಹಬೂಬ್‌ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ವನಪರ್ತಿ ಜಿಲ್ಲಾ ವೈದ್ಯಾಧಿಕಾರಿ ಶ್ರೀನಿವಾಸಲು ತಿಳಿಸಿದ್ದಾರೆ.

‘ತನ್ನ ಸ್ನೇಹಿತರಿಗಿಂತ ಕುಳ್ಳಗಿದ್ದೇನೆ ಎಂಬ ಕೀಳರಿಮೆ ನಜೀರ್‌ಗಿತ್ತು. ಕಡಿಮೆ ಸಮಯದಲ್ಲಿ ಎತ್ತರ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಸಹಜವಾಗಿ ಎತ್ತರ ಹೆಚ್ಚಿಸುವ ಕುರಿತ ದೂರದರ್ಶನ ಜಾಹೀರಾತು ನೋಡಿ ಔಷಧ ಖರೀದಿಸಿದ್ದ. ನನಗೂ ತಿಳಿಸಿದೆ ಆ ನಕಲಿ ಔಷಧ ಸೇವಿಸಿದ್ದಾನೆ’ ಎಂದು ನಜೀರ್ ತಾಯಿ ಗೋರಿ ಬೀ ತಿಳಿಸಿದ್ದಾರೆ.

ADVERTISEMENT

‘ಔಷಧ ಸೇವಿಸಿದ ಮೂರು ದಿನಗಳ ನಂತರ ತೀವ್ರವಾಗಿ ವಾಂತಿ, ಭೇದಿಯಾಗಿದೆ. ಆಗ ಆಸ್ಪತ್ರೆಗೆ ದಾಖಲಾಗಿದ್ದ ನಜೀರ್, ಚೇತರಿಸಿಕೊಂಡಿದ್ದರು. ಕೆಲ ದಿನಗಳ ನಂತರ ತೀವ್ರ ಸೋಕಿನಿಂದಾಗಿ ಮೆಹಬೂಬ್‌ನಗರ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ’ ಎಂದು ಶ್ರೀನಿವಾಸಲು ವಿವರಿಸಿದ್ದಾರೆ.

‘ದೂರದರ್ಶನದಲ್ಲಿ ಬರುವ ಜಾಹೀರಾತಿನ ಪ್ರಭಾವಕ್ಕೆ ಒಳಗಾಗಿ ಯಾವುದೇ ಔಷಧಗಳನ್ನು ಸೇವಿಸಬೇಡಿ. ಅವು ನಕಲಿ ಔಷಧಗಳಾಗಿರಬಹುದು. ವೈದ್ಯರ ಸಲಹೆ ಪಡೆಯದೇ ಯಾವ ಕಾಯಿಲೆಗೂ ಚಿಕಿತ್ಸೆ ಪಡೆಯಬೇಡಿ’ ಎಂದು ಅವರು ಯುವಕರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.