ADVERTISEMENT

ಸಮೀಕ್ಷೆಗೆ ಗುಲಾಬಿ ಬಣ್ಣ

ಲಿಂಗ ತಾರತಮ್ಯಕ್ಕೆ, ಅಸಮಾನತೆ ನಿವಾರಣೆಗೆ ಶಿಫಾರಸು

ಪಿಟಿಐ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

ನವದೆಹಲಿ: ಲಿಂಗತಾರತಮ್ಯ ನಿವಾರಿಸಿ ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಬಾರಿಯ ಆರ್ಥಿಕ ಸಮೀಕ್ಷೆಯನ್ನು  ಗುಲಾಬಿ ಬಣ್ಣದ ಕಾಗದದಲ್ಲಿ ಮಂಡಿಸಿದೆ.

ಭಾರತೀಯ ಕುಟುಂಬ ಮತ್ತು ಸಮಾಜದಲ್ಲಿ ಮಗನಿಗೆ ದೊರೆಯುತ್ತಿರುವ ಆದ್ಯತೆ ಮಗಳಿಗೆ ಸಿಗುತ್ತಿಲ್ಲ. ದೇಶದ ಅಭಿವೃದ್ಧಿಗೆ ತೊಡಕಾಗಿರುವ ಈ ಸಾಮಾಜಿಕ ತಾರತಮ್ಯ ಮತ್ತು ಲಿಂಗ ಅಸಮಾನತೆ ತೊಡೆದು ಹಾಕುವ ನಿಟ್ಟಿನಲ್ಲಿ ಸಮೀಕ್ಷೆ ಅನೇಕ ಮಹತ್ವದ ಶಿಫಾರಸುಗಳನ್ನು ಮಾಡಿದೆ.

ಭ್ರೂಣ ಲಿಂಗಪತ್ತೆಗೆ ಕಠಿಣ ಕಾನೂನು ಜಾರಿಯಲ್ಲಿದ್ದರೂ ಹೆಣ್ಣು ಭ್ರೂಣಗಳ ಹತ್ಯೆ ನಿಂತಿಲ್ಲ. ಇದು ಲಿಂಗಾನುಪಾತ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಪೋಷಕರ ಇಚ್ಛೆಗೆ ವಿರುದ್ಧವಾಗಿ ಜನಿಸಿದ ಹೆಣ್ಣು ಮಕ್ಕಳ ಸಂಖ್ಯೆಯೇ 2.1 ಕೋಟಿಯಷ್ಟಿದೆ ಎಂದು ಸಮೀಕ್ಷೆ ಆತಂಕ ವ್ಯಕ್ತಪಡಿಸಿದೆ.

ADVERTISEMENT

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರಿಗೆ ರಾಜಕೀಯ ರಂಗದಲ್ಲಿ ಸಿಗುತ್ತಿರುವ ಸ್ಥಾನಮಾನ ಮತ್ತು ನಾಯಕತ್ವ ಅವಕಾಶ ತುಂಬಾ ಕಡಿಮೆ. ರಾಜಕಾರಣದಲ್ಲಿ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಮತ್ತು ನಾಯಕತ್ವ ದೊರೆತರೆ ಲಿಂಗ ಸಮಾನತೆ ನೀತಿಗಳ ಪರಿಣಾಮಕಾರಿ ಜಾರಿಗೆ ಪ್ರಭಾವ ಬೀರಬಹುದು ಎಂದು ಸಮೀಕ್ಷೆ ಹೇಳಿದೆ.

ಪೂರ್ವ ಆಫ್ರಿಕಾದ ರುವಾಂಡದಲ್ಲಿ ಶೇ 60ರಷ್ಟು ಮಹಿಳಾ ಜನಪ್ರತಿನಿಧಿಗಳಿದ್ದರೆ, ಭಾರತ, ಈಜಿಪ್ಟ್‌, ಶ್ರೀಲಂಕಾ, ಬ್ರೇಜಿಲ್‌, ಮಲೇಷ್ಯಾ, ಜಪಾನ್‌ ಮತ್ತು ಥಾಯ್ಲೆಂಡ್‌ ಸಂಸತ್‌ನಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ 15ಕ್ಕಿಂತ ಕಡಿಮೆ.

ಭಾರತದ ಜನಸಂಖ್ಯೆಯ ಪೈಕಿ ಮಹಿಳೆಯರ ಸಂಖ್ಯೆ ಶೇ 49ರಷ್ಟಿದ್ದರೂ ಅವರಿಗೆ ದೊರೆಯುತ್ತಿರುವ ರಾಜಕೀಯ ಪ್ರಾತಿನಿಧ್ಯ ಕಡಿಮೆ. 2010ರಿಂದ 2017ರ ಅವಧಿಯಲ್ಲಿ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಪ್ರಾತಿನಿಧ್ಯ ಶೇ 1ರಷ್ಟು ಹೆಚ್ಚಳವಾಗಿದೆ.

ಮಹಿಳೆಯರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಕಳೆದ 10–15 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಸುಧಾರಿಸಿದೆ ಎಂದು ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.