ADVERTISEMENT

ಟಿಕೆಟ್‌ ಹಂಚಿಕೆ ಭರವಸೆ ನೀಡದಂತೆ ತಾಕೀತು

ಸಮೀಕ್ಷೆ ನಂತರ ನಿರ್ಧಾರ: ಕಾಂಗ್ರೆಸ್‌ ಹೈಕಮಾಂಡ್‌...

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಟಿಕೆಟ್‌ ಹಂಚಿಕೆ ಭರವಸೆ ನೀಡದಂತೆ ತಾಕೀತು
ಟಿಕೆಟ್‌ ಹಂಚಿಕೆ ಭರವಸೆ ನೀಡದಂತೆ ತಾಕೀತು   

ನವದೆಹಲಿ: ವಿಧಾನಸಭೆ ಚುನಾವಣೆಯ ಟಿಕೆಟ್‌ ಹಂಚಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಆಕಾಂಕ್ಷಿಗಳಿಗೆ ಯಾವುದೇ ರೀತಿಯ ಭರವಸೆ ನೀಡದಂತೆ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಇತರ ಮುಖಂಡರಿಗೆ ಸೂಚಿಸಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಟಿಕೆಟ್‌ ಹಂಚಿಕೆ ಬಗ್ಗೆ ಕೆಲವರಿಗೆ ಭರವಸೆ ನೀಡುತ್ತಿರುವುದರಿಂದ ಕಾರ್ಯಕರ್ತರಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದೆ ಎಂದು ಪಕ್ಷದ ಮುಖಂಡರು ದೂರು ನೀಡಿರುವ ಕಾರಣ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಕುರಿತು ಎಚ್ಚರಿಕೆ ನೀಡಿದ್ದಾರೆ ಎಂದು ಹೈಕಮಾಂಡ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡುತ್ತಿರುವುದಲ್ಲದೆ, ಈ ಕುರಿತ ಹೇಳಿಕೆ ನೀಡುತ್ತಿರುವುದರಿಂದ ತೀವ್ರ ಗೊಂದಲ ಸೃಷ್ಟಿಯಾಗಿದೆ. ಒಂದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭರವಸೆ ನೀಡಿರುವುದರಿಂದ ಇನ್ನೊಂದು ಕ್ಷೇತ್ರದ ಆಕಾಂಕ್ಷಿಗಳಲ್ಲೂ ಗೊಂದಲಕ್ಕೆ ಕಾರಣವಾಗಿದೆ ಎಂದು ಹೈಕಮಾಂಡ್‌ಗೆ ದೂರಲಾಗಿದೆ.

ADVERTISEMENT

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಸಮಾರಂಭದಲ್ಲಿ ಸಿ.ವಿ. ರಾಮನ್ ನಗರ ಕ್ಷೇತ್ರದ ಟಿಕೆಟ್ ಅನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ನೀಡುವುದಾಗಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ ಎಂದು ಪಕ್ಷದ ಕೆಲವು ರಾಜ್ಯ ಮುಖಂಡರು ವರಿಷ್ಠರಿಗೆ ದೂರು ಸಲ್ಲಿಸಿದ್ದು, ಟಿ.ನರಸೀಪುರ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಡುವ ಇರಾದೆಯೊಂದಿಗೇ ಮಹದೇವಪ್ಪ ಅವರು ಕ್ಷೇತ್ರ ಬದಲಿಸುವ ಆಲೋಚನೆ ಹೊಂದಿದ್ದಾರೆ. ಅದಕ್ಕೆ ಪ್ರೋತ್ಸಾಹ ನೀಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.