ADVERTISEMENT

ರೋಸ್ಟರ್‌ ಪದ್ಧತಿಯಲ್ಲಿ ವಿಚಾರಣೆ

ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕರಣಗಳ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ರೋಸ್ಟರ್‌ ಪದ್ಧತಿಯಲ್ಲಿ ವಿಚಾರಣೆ
ರೋಸ್ಟರ್‌ ಪದ್ಧತಿಯಲ್ಲಿ ವಿಚಾರಣೆ   

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗುವ ಪ್ರಕರಣಗಳನ್ನು ಸರದಿ ಪಟ್ಟಿ (ರೋಸ್ಟರ್‌) ಪದ್ಧತಿಯ ಆಧಾರದ ಮೇಲೆ ವಿಚಾರಣೆಗೆ ಹಂಚಿಕೆ ಮಾಡಲು ನಿರ್ಧರಿಸಿರುವ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಈ ಪಟ್ಟಿಯನ್ನು ಗುರುವಾರ ಬಹಿರಂಗಗೊಳಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಚುನಾವಣೆ ಹಾಗೂ ಸಾಂವಿಧಾನಿಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವಿಚಾರಣೆಯನ್ನು ತಮ್ಮ ನೇತೃತ್ವದ ಪೀಠದಲ್ಲಿಯೇ ನ್ಯಾ.ಮಿಶ್ರಾ ನಡೆಸಲಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ನ್ಯಾಯಮೂರ್ತಿಗಳಿಗೆ ಲಂಚ ನೀಡಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಈ ರೋಸ್ಟರ್‌ ಆಧಾರದ ಮೇಲೆ ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠವೇ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ನ್ಯಾ. ಚೆಲಮೇಶ್ವರ್, ಈ ಪ್ರಕರಣದ ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ಪೀಠವನ್ನು ರಚಿಸುವಂತೆ ಹೇಳಿದ್ದರಿಂದ ಅದರಂತೆ ಈಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

ADVERTISEMENT

ಕಳೆದ ಜನವರಿ 12ರಂದು ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪ್ರಕರಣಗಳ ಹಂಚಿಕೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾಗೋಷ್ಠಿ ನಡೆಸಿದ್ದ ಬೆನ್ನಲ್ಲೇ ನ್ಯಾ.ಮಿಶ್ರಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಹೊಸ ರೋಸ್ಟರ್‌ ಪದ್ಧತಿಯ ಪ್ರಕಾರ, ನ್ಯಾ.ಚೆಲಮೇಶ್ವರ ಅವರು ಕಾರ್ಮಿಕ, ಪರೋಕ್ಷ ತೆರಿಗೆ, ಭೂಸ್ವಾಧೀನ, ಪರಿಹಾರ, ಕ್ರಿಮಿನಲ್‌, ಭೂಮಿ ವಿವಾದ ಮತ್ತು ಗ್ರಾಹಕರ ಸಂಬಂಧಿ ವ್ಯಾಜ್ಯಗಳ ವಿಚಾರಣೆ ನಡೆಸಲಿದ್ದಾರೆ. ನ್ಯಾ.ಗೊಗೋಯಿ ವೈಯಕ್ತಿಕ ಕಾನೂನು, ನ್ಯಾಯಾಂಗ ಅಧಿಕಾರಿಗಳ ಕೇಸ್‌, ನ್ಯಾಯಾಂಗ ನಿಂದನೆ ಸೇರಿದಂತೆ ಇನ್ನು ಕೆಲವು ಪ್ರಕರಣ; ನ್ಯಾ.ಲೋಕೂರ್‌ ಅವರು ಪರಿಸರ, ಸಾಮಾಜಿಕ ನ್ಯಾಯ, ಗಣಿ ಮುಂತಾದವು; ನ್ಯಾ. ಜೋಸೆಫ್‌ ಅವರು ಬಾಡಿಗೆ, ಕೌಟುಂಬಿಕ ಕಾನೂನು ಸೇರಿದಂತೆ ಇತರ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ನ್ಯಾಯಮೂರ್ತಿ ಲೋಯಾ ಅವರ ಸಾವಿನ ಕುರಿತಾದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ.ಅರುಣ್‌ ಮಿಶ್ರಾ ಅವರಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜು ಮುಂತಾದ ಪ್ರಕರಣಗಳನ್ನು ನೀಡಲಾಗಿದೆ.

ನೂತನ ನ್ಯಾಯಮೂರ್ತಿಗಳ ಹೆಸರು ಬಹಿರಂಗ

ನವದೆಹಲಿ (ಪಿಟಿಐ): ಉತ್ತರಾಖಂಡದ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ಅವರ ಹೆಸರನ್ನು ಸುಪ್ರೀಂಕೋರ್ಟ್‌ಗೆ ಶಿಫಾರಸು ಮಾಡಿ ಸುಪ್ರೀಂಕೋರ್ಟ್‌ ಕೊಲಿಜಿಯಂ ನಿರ್ಣಯ ತೆಗೆದುಕೊಂಡಿರುವ ಬಗ್ಗೆ ಬುಧವಾರ ಬಹಿರಂಗಗೊಳಿಸಲಾಗಿದೆ. ‘ಬೇರೆ ಹೈಕೋರ್ಟ್‌ಗಳ ಯಾವುದೇ ಮುಖ್ಯನ್ಯಾಯಮೂರ್ತಿ ಮತ್ತು  ನ್ಯಾಯಮೂರ್ತಿಗಳಿಂದ ಜೋಸೆಫ್‌ ಅವರು ಈ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.

ನ್ಯಾ.ಜೋಸೆಫ್‌ ಅವರ ಜೊತೆ ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಇಂದೂ ಅವರು ನೇರ ನೇಮಕಾತಿ ಮೂಲಕ ಈ ಹುದ್ದೆಗೇರುತ್ತಿರುವ ಮೊದಲ ಮಹಿಳೆಯಾಗಿದ್ದಾರೆ. ಸ್ವಾತಂತ್ರ್ಯಾನಂತರ ಇದುವರೆಗೆ ಸುಪ್ರೀಂಕೋರ್ಟ್‌ನಲ್ಲಿ ಆರು ಮಹಿಳೆಯರು ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದು, ಇಂದೂ ಅವರು ಏಳನೇ ಮಹಿಳೆಯಾಗಿದ್ದಾರೆ.

ಉತ್ತಾರಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು 2016ರಲ್ಲಿ ರದ್ದುಮಾಡಿದ ನಂತರ ನ್ಯಾಯಮೂರ್ತಿ ಜೋಸೆಫ್‌ ಅವರು ಬಹು ಪ್ರಸಿದ್ಧಿಗೆ ಬಂದಿದ್ದರು.

ಮುಖ್ಯನ್ಯಾಯಮೂರ್ತಿ ಸೇರಿದಂತೆ ಸುಪ್ರೀಂಕೋರ್ಟ್‌ನಲ್ಲಿ ಒಟ್ಟೂ 31 ನ್ಯಾಯಮೂರ್ತಿಗಳ ಹುದ್ದೆ ಇದ್ದು, ಸದ್ಯ 25 ನ್ಯಾಯಮೂರ್ತಿಗಳು ಕರ್ತವ್ಯದಲ್ಲಿದ್ದಾರೆ. ನ್ಯಾ.ಮಿಶ್ರಾ ಅವರ ಜೊತೆ ಕೊಲೀಜಿಯಂನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಜೆ.ಚೆಲ್ಮೇಶ್ವರ, ರಂಜನ್‌ ಗೋಯಲ್‌, ಮದನ್‌ ಬಿ.ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಇದ್ದರು. ಈ ನಿರ್ಣಯದ ಬಗ್ಗೆ ಸುಪ್ರೀಂಕೋರ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.