ADVERTISEMENT

ಅನಿಲ ಭಾಗ್ಯ: ಮಾರ್ಗಸೂಚಿ ಉಲ್ಲಂಘನೆಗೆ ಕೇಂದ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
ಅನಿಲ ಭಾಗ್ಯ: ಮಾರ್ಗಸೂಚಿ ಉಲ್ಲಂಘನೆಗೆ ಕೇಂದ್ರ ಆಕ್ಷೇಪ
ಅನಿಲ ಭಾಗ್ಯ: ಮಾರ್ಗಸೂಚಿ ಉಲ್ಲಂಘನೆಗೆ ಕೇಂದ್ರ ಆಕ್ಷೇಪ   

ನವದೆಹಲಿ: ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ ಅನುಷ್ಠಾನದಲ್ಲಿ ಕರ್ನಾಟಕ ಸರ್ಕಾರವು ಮಾರ್ಗಸೂಚಿ ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಆರೋಪಿಸಿದೆ.

ಕೇಂದ್ರ ಸರ್ಕಾರದ ಪ್ರಾಯೋಜಿತ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಮಾರ್ಗಸೂಚಿಯಂತೆ ಭಾರತ್‌ ಗ್ಯಾಸ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಅಥವಾ ಇಂಡಿಯನ್‌ ಗ್ಯಾಸ್‌ನಂತಹ ತೈಲ ಮಾರುಕಟ್ಟೆ  ಕಂಪನಿಗಳ (ಒಎಂಸಿ) ಮೂಲಕ ಕಾರ್ಯಕ್ರಮ ಜಾರಿಗೊಳಿಸುವುದನ್ನು ಕಡ್ಡಾಯಗೊಳಿಸಿದೆ.

ಆದರೆ, ಕರ್ನಾಟಕ ಸರ್ಕಾರವು ಅಡುಗೆ ಅನಿಲ ವಿತರಕರ ಜಾಲದ ಮೂಲಕ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆರೋಪಿಸಿದೆ.

ADVERTISEMENT

ಛತ್ತೀಸಗಡ , ಜಾರ್ಖಂಡ್‌, ಅಸ್ಸಾಂ, ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಕೇಂದ್ರದ ಮಾರ್ಗಸೂಚಿಯ ಅನುಸಾರ ಪ್ರಧಾನಮಂತ್ರಿ ಉಜ್ವಲ ಯೋಜನೆ ಅನುಷ್ಠಾನಗೊಳಿಸಿವೆ. ಅದೇ ಮಾದರಿ ಅನುಸರಿಸಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿತ್ತು ಎಂದು ಕೇಂದ್ರ ಹೇಳಿದೆ.

ಮಾರ್ಗಸೂಚಿ ಅನುಸರಿಸದಿದ್ದರೆ ಕರ್ನಾಟಕದ ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ಗೆ ಒಪ್ಪಿಗೆ ನೀಡುವುದಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.

ಮೇ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂಯುವೈಗೆ ಚಾಲನೆ ನೀಡಿದ್ದರು.

ಕರ್ನಾಟಕ ಸರ್ಕಾರ ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ ಅಡಿ ಬಡ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕದ ಜತೆ ಉಚಿತವಾಗಿ ಒಲೆಯನ್ನೂ (ಗ್ಯಾಸ್‌ಸ್ಟೋವ್‌) ನೀಡುವುದಾಗಿ ಹೇಳಿತ್ತು.

ಇದಕ್ಕೆ ಆಕ್ಷೇಪ ಎತ್ತಿದ ಕೇಂದ್ರ ಸರ್ಕಾರ, ಅಡುಗೆ ಅನಿಲದ ಒಲೆಗಳನ್ನೂ ತಾನು ಸೂಚಿಸಿದ ಕಂಪನಿಗಳ ಮೂಲಕವೇ ವಿತರಿಸುವಂತೆ ತಾಕೀತು ಮಾಡಿದೆ. ಆದರೆ, ಇದನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.