ADVERTISEMENT

ಕರ್ನಾಟಕ ಚುನಾವಣೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ಇದೇ ಸ್ಥಾನದಲ್ಲಿರುತ್ತಾರಾ ಗೊತ್ತಿಲ್ಲ: ಮೋದಿ

ಏಜೆನ್ಸೀಸ್
Published 7 ಫೆಬ್ರುವರಿ 2018, 13:42 IST
Last Updated 7 ಫೆಬ್ರುವರಿ 2018, 13:42 IST
ಮಲ್ಲಿಕಾರ್ಜುನ ಖರ್ಗೆ (ಎಡ ಚಿತ್ರ) ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಮಲ್ಲಿಕಾರ್ಜುನ ಖರ್ಗೆ (ಎಡ ಚಿತ್ರ) ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಸಂಸತ್‌ನಲ್ಲಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ವ್ಯಂಗ್ಯವಾಡಿದ್ದಾರೆ.

‘ಕರ್ನಾಟ ವಿಧಾನಸಭೆ ಚುನಾವಣೆಯ ಬಳಿಕವೂ ಖರ್ಗೆ ಇದೇ ಸ್ಥಾನದಲ್ಲಿರುತ್ತಾರಾ ಎಂಬುದು ನನಗೆ ಗೊತ್ತಿಲ್ಲ. ಇದೇ ಅವರ ಕೊನೆಯ ಮಾತಾಗಿರಬಹುದು’ ಎಂದು ಮೋದಿ ಹೇಳಿದ್ದಾರೆ.

ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ್ದ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳುವ ಸಂದರ್ಭ ಮಾತನಾಡಿದ್ದ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಮು ದ್ವೇಷಗಳ ಹೆಚ್ಚಳಕ್ಕೆ ಸರ್ಕಾರವನ್ನು ದೂಷಿಸಿದ್ದಾರೆ. ಅಲ್ಲದೆ, ಸರ್ಕಾರ ಸಮಾಜದ ದುರ್ಬಲ ವರ್ಗದವರನ್ನು ದಮನಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ‘ಖರ್ಗೆಯವರೇ ನೀವು ಕರ್ನಾಟಕದವರು ಅಲ್ಲವೇ? ಕನಿಷ್ಠಪಕ್ಷ ಬಸವಣ್ಣನವರ ತತ್ವಗಳನ್ನು ನೆನಪಿಸಿಕೊಳ್ಳಿ. ಅವರು 12ನೇ ಶತಮಾನದಲ್ಲಿ ಅನುಭವಮಂಟಪ ಸ್ಥಾಪಿಸಿದ್ದರು. ಅವರು ಮಾಡಿದ್ದೆಲ್ಲ ಪ್ರಜಾಪ್ರಭುತ್ವ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿಯೇ ಆಗಿತ್ತು. ಅದುವೇ ಅವರ ಪ್ರಮುಖ ಆದ್ಯತೆಯೂ ಆಗಿತ್ತು. ಇದು 12ನೇ ಶತಮಾನದಲ್ಲಿ ಭಾರತದಲ್ಲಿದ್ದ ಪ್ರಜಾಪ್ರಭುತ್ವ. ನೀವದನ್ನು ಮರೆತಿರಾ ಖರ್ಗೆಯವರೇ’ ಎಂದು ಪ್ರಶ್ನಿಸಿದ್ದಾರೆ.

ಬೀದರ್–ಕಲಬುರ್ಗಿ ರೈಲ್ವೆ ಮಾರ್ಗ ವಿಚಾರ ಪ್ರಸ್ತಾಪ: ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ನೆರವಾಗುತ್ತಿಲ್ಲ ಎಂಬ ಖರ್ಗೆ ಆರೋಪಕ್ಕೆ ಪ್ರತಿಯಾಗಿ ಮೋದಿ ಬೀದರ್–ಕಲಬುರ್ಗಿ ರೈಲ್ವೆ ಮಾರ್ಗ ವಿಚಾರ ಪ್ರಸ್ತಾಪಿಸಿದ್ದಾರೆ.

‘ಖರ್ಗೆ ಅವರೇ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೀದರ್–ಕಲಬುರ್ಗಿ ರೈಲ್ವೆ ಮಾರ್ಗ ಯೋಜನೆಗೆ ಅನುಮತಿ ನೀಡಲಾಗಿತ್ತು. 2004ರಿಂದ 2013ರ ವರೆಗೆ ಆ ಬಗ್ಗೆ ಏನೂ ಮಾಡಿಲ್ಲ. ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಕೆಲಸ ಆರಂಭಿಸಲಾಗಿತ್ತು’ ಎಂದು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ತಿರುಗೇಟು: ಪ್ರಧಾನಿ ಟೀಕೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯವರ ಅದೃಷ್ಟವನ್ನೂ ಜನರೇ ನಿರ್ಧರಿಸುತ್ತಾರೆ. ಕರ್ನಾಟಕದ ಕಲಬುರ್ಗಿಯ ಜನ ಮಲ್ಲಿಕಾರ್ಜುನ ಖರ್ಗೆ ಅವರ ಅದೃಷ್ಟವನ್ನು ನಿರ್ಧರಿಸಲಿದ್ದಾರೆ. ಅಲ್ಲಿಯವರೆಗೆ ಗುಜರಾತ್ ಅಭಿವೃದ್ಧಿ ಮಾದರಿ ಮತ್ತು ಕರ್ನಾಟಕ ಮಾದರಿ ಬಗ್ಗೆ ಚರ್ಚೆ ಮಾಡೋಣ. ಖ್ಯಾತ ಭಾಷಣದ ಕಲೆ ತುಂಬಾ ದೀರ್ಘ ಸಮಯದವರೆಗೆ ಸುಳ್ಳುಗಳನ್ನು ಮುಚ್ಚಿಡಲಾರದು’ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.