ADVERTISEMENT

ಸಚಿವರ ಹಸ್ತಕ್ಷೇಪ ಹಿಮ್ಮೆಟ್ಟಿಸಿದ ಪ್ರಸಾರ ಭಾರತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST

ನವದೆಹಲಿ:'ಸ್ವಾಯತ್ತ ಸಂಸ್ಥೆ' ಪ್ರಸಾರ ಭಾರತಿಯ ಅನುದಿನದ ಆಗು ಹೋಗುಗಳ ಮೇಲೆ ಪರೋಕ್ಷ ಹಿಡಿತ ಸಾಧಿಸುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹುನ್ನಾರ ಹೊಸ್ತಿಲಲ್ಲೇ ಮುಗ್ಗರಿಸಿದೆ.

ಹಿರಿಯ ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಅಧ್ಯಕ್ಷತೆಯ ಪ್ರಸಾರ ಭಾರತಿ ಮಂಡಳಿ ಸಿಡಿದೆದ್ದು ಈ ಹುನ್ನಾರವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ವಾರ್ತಾ ಮತ್ತು ಪ್ರಸಾರ ಮಂತ್ರಿ ಸ್ಮೃತಿ ಇರಾನಿ ಅವರು ಪ್ರಧಾನಮಂತ್ರಿಯವರ ವಿಶೇಷ ವಿಶ್ವಾಸಕ್ಕೆ ಪಾತ್ರರು ಎಂದೇ ರಾಜಕೀಯ ವಲಯಗಳು ನಂಬುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ ಸ್ಮೃತಿ ಅವರನ್ನು ಎದುರು ಹಾಕಿಕೊಂಡಿರುವ ಪ್ರಸಾರ ಭಾರತಿಯ ನಡೆ ಈ ವಲಯಗಳ ಹುಬ್ಬೇರಿಸಿದೆ.

ತಮ್ಮ ವಿರುದ್ಧದ 'ಬಂಡಾಯ'ದಿಂದ ಕೆರಳಿದ್ದಾರೆ ಎನ್ನಲಾದ ಸ್ಮೃತಿ ಮತ್ತು ಪ್ರಸಾರ ಭಾರತಿ ನಡುವಣ ತಿಕ್ಕಾಟ ಮುಂಬರುವ ದಿನಗಳಲ್ಲಿ ಯಾವ ರೂಪ ತಳೆದೀತು ಎಂಬ ಕುತೂಹಲವನ್ನು ಗರಿಗೆದರಿಸಿದೆ.

ADVERTISEMENT

ದೂರದರ್ಶನ ಮತ್ತು ಆಕಾಶವಾಣಿ ಈ ಹಿಂದೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿದ್ದವು. ಅವುಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಬೇಕೆಂಬ ದಶಕಗಳ ಕೂಗು ‘ಪ್ರಸಾರ ಭಾರತಿ’ ರಚನೆಯೊಂದಿಗೆ ಅಡಗಿತು.

ಹಳೆಯ ವ್ಯವಸ್ಥೆಯಲ್ಲಿದ್ದಂತೆ ಈ ಎರಡು ಸಂಸ್ಥೆಗಳ ನಿಯಂತ್ರಣದ ಅಧಿಕಾರದ ಗುಪ್ತ ಆಸೆಯನ್ನು ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಕೈ ಬಿಟ್ಟಿಲ್ಲ. ಸ್ಮೃತಿಯವರೂ ಈ ಮಾತಿಗೆ ಹೊರತಲ್ಲ. ಪ್ರಸಾರ ಭಾರತಿ ಮತ್ತು ಸಚಿವಾಲಯದ ನಡುವೆ ಕಳೆದ ಆರು ತಿಂಗಳಿನಿಂದ ನಡೆಯುತ್ತಿದ್ದ ಈ ತಿಕ್ಕಾಟ ಮೊನ್ನೆ ಹಠಾತ್ ಸ್ಫೋಟಗೊಂಡಿದೆ.

ತಮ್ಮ ಆಯ್ಕೆಯ ಇಬ್ಬರು ಹಿರಿಯ ಪತ್ರಕರ್ತರನ್ನು, ತಾವೇ ನಿಗದಿ ಮಾಡಿದ ಸಂಬಳ ಸಾರಿಗೆಯ ಪ್ರಕಾರ ಪ್ರಸಾರ ಭಾರತಿಯ ಉನ್ನತ ಸಂಪಾದಕೀಯ ಹುದ್ದೆಗಳಿಗೆ ನೇಮಕ ಮಾಡುವ ಸ್ಮೃತಿ ಅವರ ಪ್ರಯತ್ನ ಫಲ ನೀಡಿಲ್ಲ. ಪ್ರಸಾರ ಭಾರತಿ ಸದಸ್ಯ ಮಂಡಳಿಗೆ ತಮ್ಮ ಆಯ್ಕೆಯ ಹಿರಿಯ ಐ.ಎ.ಎಸ್. ಅಧಿಕಾರಿಯೊಬ್ಬರನ್ನು ಡೆಪ್ಯೂಟೇಷನ್ ಆಧಾರದಲ್ಲಿ ನೇಮಕ ಮಾಡಬೇಕೆಂಬ ಅವರ ಇನ್ನೊಂದು ಪ್ರಮುಖ ನಡೆಗೂ ತೀವ್ರ ಮುಖಭಂಗ ಆಗಿದೆ. ಮೂರನೆಯದಾಗಿ ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಗುತ್ತಿಗೆ ಆಧಾರದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂಬ ಸ್ಮೃತಿ ಅವರ ಇನ್ನೊಂದು ಆದೇಶವನ್ನೂ ಪ್ರಸಾರ ಭಾರತಿ ನೇರವಾಗಿ ತಿರಸ್ಕರಿಸಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಸ್ತಕ್ಷೇಪವು ಪ್ರಸಾರ ಭಾರತಿ ಕಾಯಿದೆಯನ್ನು ಉಲ್ಲಂಘಿಸಿರುವುದೇ ಅಲ್ಲದೆ ಮಂಡಳಿಯ ನೇಮಕಗಳಲ್ಲಿ ನಿರ್ಣಯಾತ್ಮಕ ಅಧಿಕಾರ ಹೊಂದಿರುವ ಉಪರಾಷ್ಟ್ರಪತಿಯವರ ಸ್ಥಾನಮಾನವನ್ನೂ ಕಡೆಗಣಿಸಿದೆ. ಸ್ವಾಯತ್ತ ಸಂಸ್ಥೆಯೊಂದರ ಆಗು ಹೋಗುಗಳ ಕುರಿತು ಆಜ್ಞಾಪಿಸುವ ಧೋರಣೆಯ ಪತ್ರಗಳನ್ನು ಬರೆಯುವ ಮತ್ತು ಗೊತ್ತುವಳಿಗಳನ್ನು ಸಿದ್ಧಪಡಿಸುವ ಅಧಿಕಾರ ಸಚಿವಾಲಯಕ್ಕೆ ಇಲ್ಲ, ಪತ್ರಗಳು ಅದೇಶಗಳನ್ನು ವಾಪಸು ಪಡೆಯಬೇಕು ಎಂದು ಪ್ರಸಾರ ಭಾರತಿ ಪ್ರತಿಭಟಿಸಿದೆ.

ಸಿದ್ದಾರ್ಥ ಝರಾಬಿ ಅವರನ್ನು ದೂರದರ್ಶನದ ಸುದ್ದಿ ಮುಖ್ಯಸ್ಥರನ್ನಾಗಿಯೂ ಅಭಿಜಿತ್ ಮಜುಮ್ದಾರ್ ಅವರನ್ನು ಪ್ರಸಾರ ಭಾರತಿ ಸುದ್ದಿ ಸೇವೆಯ ಮುಖ್ಯ ಸಂಪಾದಕರನ್ನಾಗಿಯೂ ನೇಮಕ ಮಾಡಿಕೊಳ್ಳುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.