ADVERTISEMENT

ಹೆಣ್ಣುಭ್ರೂಣ ಹತ್ಯೆ ಎಂಬ ರಾಷ್ಟ್ರೀಯ ಲಜ್ಜೆ

ಚೇತನಾ ತೀರ್ಥಹಳ್ಳಿ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST

ರಾಜ್ಯದಲ್ಲಿ ಮೊನ್ನೆ (ಫೆ.16) ಮತ್ತೆ ನಾಲ್ಕು ಹೆಣ್ಣುಮಕ್ಕಳು ಹೆಣ್ಣಾಗಿರುವ ಕಾರಣಕ್ಕೆ ಸತ್ತುಹೋದರು. ಹುಟ್ಟುವ ಮೊದಲೇ ಹೆಣ್ಣುಮಕ್ಕಳನ್ನು ಸಾಯಿಸಲಾಗುತ್ತಿರುವಾಗ, ಈ ನಾಲ್ವರು ‘ಹುಟ್ಟಿದ ನಂತರ’ ಸತ್ತುಹೋದರು ಅನ್ನುವುದು ಹೆಚ್ಚುಗಾರಿಕೆ. ಅದರಲ್ಲಿ ಒಬ್ಬಳು ಗುಡಿಬಂಡೆಯ ತಾಯಿ. ತಾನು ಹೆತ್ತ ಮೂರನೆಯ ಮಗುವೂ ಹೆಣ್ಣೇ ಆಯಿತು ಅನ್ನುವ ಕಾರಣಕ್ಕೆ ಮೂರೂ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಳು. ಅದೇ ದಿನ ಈ ದೇಶದ ಇನ್ಯಾವುದೋ ರಾಜ್ಯದಲ್ಲಿ ಮತ್ತೊಬ್ಬ ತಾಯಿ ತನ್ನ ಹೆಣ್ಣುಮಗುವನ್ನು ಹುಟ್ಟಿದ ನಂತರವೋ ಹುಟ್ಟುವ ಮೊದಲೋ ಕೊಂದಿರಬಹುದು.

ಜನವರಿ 29ರಂದು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಿದ ಸರ್ಕಾರಿ ಅಧಿಕಾರಿಗಳು, ದೇಶದಲ್ಲಿ 6.3 ಕೋಟಿಯಷ್ಟು ಹೆಣ್ಣುಮಕ್ಕಳು ಕಡಿಮೆಯಾಗಿದ್ದಾರೆನ್ನುವ ಆತಂಕಕಾರಿ ಅಂಶವನ್ನು ಎದುರಿಟ್ಟರು. ಇಲ್ಲಿ ‘ಕಾಣೆಯಾಗಿರುವುದು’ ಎಂದರೆ, ಲಿಂಗಾನುಪಾತದಲ್ಲಿ ಕೊರತೆ ಬೀಳುತ್ತಿರುವ ಹೆಣ್ಣುಗಳ ಸಂಖ್ಯೆ ಎಂದು. ಹೆಣ್ಣುಭ್ರೂಣವನ್ನು ಪತ್ತೆಮಾಡಿ ಗರ್ಭಪಾತದ ಮೂಲಕ ಕೊಲ್ಲಲಾಗಿದೆ ಎಂದು. ಸರಳವಾಗಿ ಹೇಳುವುದಾದರೆ, ಈ ದೇಶದಲ್ಲಿ 6 ಕೋಟಿಗಿಂತಲೂ ಹೆಚ್ಚು ಹೆಣ್ಣುಮಕ್ಕಳನ್ನು ಹುಟ್ಟುವ ಮೊದಲೇ ಕೊಲೆ ಮಾಡಲಾಗಿದೆ ಎಂದು.

ಹೆಣ್ಣೆಂಬ ಕಾರಣಕ್ಕೆ ಕೊಲ್ಲುವುದೇ ಅತಿದೊಡ್ಡ ವಿಕೃತಿ. ಅದರಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಕೊಲ್ಲಲಾಗಿರುವುದು ಭರಿಸಲಾಗದ ನಷ್ಟ. ಈ ಸಂಗತಿಗೆ ನಾವು ಹೇಗೆ ಸ್ಪಂದಿಸಬೇಕಿತ್ತು ಮತ್ತು ಹೇಗೆ ಸ್ಪಂದಿಸಿದ್ದೇವೆ ಎಂದು ನೆನೆದರೆ ನಾಚಿಕೆಯಾಗುತ್ತದೆ. ಲಿಂಗಪತ್ತೆ, ಭ್ರೂಣ ಹತ್ಯೆ ಮೊದಲಾದವನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷಿಸಬೇಕೆಂಬ ಕಾನೂನು ಇರುವುದೇನೋ ಸರಿ. ಆದರೆ ಅದು ಎಷ್ಟರಮಟ್ಟಿಗೆ ಲಾಗೂ ಆಗುತ್ತಿದೆ ಅನ್ನುವುದು ಅರಿಯದ ವಿಷಯವೇನಲ್ಲ. ಈಗಲಾದರೂ, ಹೊಸ ಸಮೀಕ್ಷೆಯ ಅಂಕಿಅಂಶಗಳ ಹಿನ್ನೆಲೆಯಲ್ಲಿ ಹೆಣ್ಣುಭ್ರೂಣ ಹತ್ಯೆಯನ್ನು ‘ರಾಷ್ಟ್ರೀಯ ಲಜ್ಜೆ’ ಎಂದು ಘೋಷಿಸಬಹುದಿತ್ತು. ಸಂಖ್ಯೆಯ ದೃಷ್ಟಿಯಿಂದಲಾದರೂ ಹೆಣ್ಣು ಭ್ರೂಣ/ ಶಿಶು ಹತ್ಯೆಯನ್ನು ‘ರಾಷ್ಟ್ರೀಯ ಅಪರಾಧ’ ಎಂದು ಪರಿಗಣಿಸಬಹುದಿತ್ತು. ಬಹುಶಃ ಇಷ್ಟೆಲ್ಲ ನಿರೀಕ್ಷೆ ಕನಸಿಗೂ ಎಟುಕದ ಮಾತಾದವು. ಕೊನೆಪಕ್ಷ ಹೆಣ್ಣು ಭ್ರೂಣ ಹತ್ಯೆಯನ್ನು ಪ್ರಚೋದಿಸುವ ಮಾತುಗಳನ್ನಾಡುವವರಿಗೆ ಕಠಿಣ ಶಿಕ್ಷೆಯನ್ನಾದರೂ ವಿಧಿಸಬಹುದಿತ್ತು.

ADVERTISEMENT

ಆದರೆ ಈ ದೇಶದಲ್ಲಿ ಅಂಥ ಯಾವ ಪವಾಡಗಳೂ ನಡೆಯಲಾರವು.

ಉದಾಹರಣೆಗೆ ನೋಡಿ; ಫೆಬ್ರುವರಿ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್, ಮದುವೆ ವಿಷಯದಲ್ಲಿ ಒಂದು ಆದೇಶ ಹೊರಡಿಸಿತು. ಪರಂಪರೆ, ಸಂಪ್ರದಾಯಗಳ ಹೆಸರಲ್ಲಿ ವಯಸ್ಕರ ಮದುವೆಗೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಅದು ಸೂಚಿಸಿತು. ಅದಕ್ಕೆ ಪ್ರತಿಕ್ರಿಯೆಯಾಗಿ ನರೇಶ್ ಟಿಕಾಯತ್ ಎಂಬ ವ್ಯಕ್ತಿ ಒಂದು ಹೇಳಿಕೆ ಕೊಟ್ಟರು. ‘ತಲತಲಾಂತರದಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡುವುದನ್ನು ಸಹಿಸಲಾಗದು’ ಎಂದ ಈತ, ‘ಅದು ಮಧ್ಯಪ್ರವೇಶಿಸುವುದೇ ಆದಲ್ಲಿ, ನಾವು ಹೆಣ್ಣುಮಕ್ಕಳ ಜನನವನ್ನೇ ತಡೆಹಿಡಿಯುತ್ತೇವೆ. ಹೆಣ್ಣುಮಕ್ಕಳು ತಮ್ಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವಷ್ಟು ವಿದ್ಯಾಭ್ಯಾಸ ಮಾಡಲಿಕ್ಕೇ ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ‘ಹೆಣ್ಣುಮಕ್ಕಳ ಮದುವೆ ನಮ್ಮ ಮರ್ಜಿಯಂತೆ ನಡೆಯಬೇಕು. ಆದಕ್ಕೆ ಅವಕಾಶವಿಲ್ಲ ಎನ್ನುವುದಾದರೆ, ನಮ್ಮ ಜನರಿಗೆ ನಾನು ಹೆಣ್ಣುಮಕ್ಕಳನ್ನೇ ಹುಟ್ಟಿಸಬೇಡಿ ಅನ್ನುತ್ತೇನೆ. ಆಮೇಲೆ ಹೆಣ್ಣು– ಗಂಡುಗಳ ಅನುಪಾತದಲ್ಲಿ ಹೆಚ್ಚುಕಡಿಮೆಯಾದರೆ ನ್ಯಾಯಾಲಯವೇ ಅದಕ್ಕೆ ಹೊಣೆಯಾಗಬೇಕಾಗುತ್ತದೆ’ ಎಂದು ಪುನರುಚ್ಚರಿಸುವ ಮೂಲಕ ಟಿಕಾಯತ್ ತಮ್ಮ ಸ್ತ್ರೀವಿರೋಧಿ ಚಿಂತನೆಯನ್ನು ಬಹಿರಂಗವಾಗಿ ಘೋಷಿಸಿಕೊಂಡರು.

ನರೇಶ್ ಟಿಕಾಯತ್ ಉತ್ತರಪ್ರದೇಶದ ಮುಜಫ್ಫರಾಬಾದ್‌ನ ಬಲಿಯಾನ್ ಖಾಪ್ ಮುಖಂಡ. ಈ ಖಾಪ್ ಪಂಚಾಯ್ತಿಯ ತೀರ್ಪು– ನಡಾವಳಿಗಳು ಬಹುತೇಕ ಅಸಾಂವಿಧಾನಿಕವಾಗಿದ್ದು, ಮೇಲಿಂದ ಮೇಲೆ ವಿವಾದ ಸೃಷ್ಟಿಸುತ್ತಲೇ ಇರುತ್ತವೆ. ಇಂತಹ ಹಿನ್ನೆಲೆಯ ಖಾಪ್ ಮುಖಂಡನ ಮಾತನ್ನು ಲಘುವಾಗಿ ‘ಉದ್ವೇಗದ ಕ್ಷಣಿಕ ಪ್ರತಿಕ್ರಿಯೆ’ ಎಂದು ತಳ್ಳಿಹಾಕಲಾಗದು. ಹಾಗೊಮ್ಮೆ ಅದನ್ನು ಕೇವಲ ಅಪ್ರಾಯೋಗಿಕ ಹೇಳಿಕೆ ಎಂದೇ ಪರಿಗಣಿಸಿದರೂ; ಹೆಣ್ಣುಭ್ರೂಣ ಹತ್ಯೆಯನ್ನು ಪ್ರಚೋದಿಸುವ, ಸ್ತ್ರೀ ಅಸ್ಮಿತೆಯನ್ನೇ ನಿರಾಕರಿಸುವ ಆ ಮಾತುಗಳು ಅಪರಾಧ ವ್ಯಾಪ್ತಿಗೆ ಒಳಪಡುವಂಥವು. ಈ ನಿಟ್ಟಿನಲ್ಲಿ ಟಿಕಾಯತ್‌ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಕೆಲಸ ಆಗಬೇಕಿತ್ತು. ದಂಡನೆ ವಿಧಿಸಿ ಇಂತಹ ಹೇಳಿಕೆಗಳನ್ನು ಕೊಡದಂತೆ ಮುಚ್ಚಳಿಕೆ ಬರೆಸಿಕೊಳ್ಳಬೇಕಿತ್ತು. ಆದೇಶಕ್ಕೆ ಅಸಮ್ಮತಿ ತೋರಿ ಕೋರ್ಟಿಗೇ ಸವಾಲು ಹಾಕಿದ್ದು ನ್ಯಾಯಾಂಗಕ್ಕೆ ತೋರಿದ ಅಗೌರವವೆಂದು ಗಂಭೀರವಾಗಿ ಪರಿಗಣಿಸಬೇಕಿತ್ತು.

ಆದರೆ ಆಗಿದ್ದೇನು? ನರೇಶ್ ಟಿಕಾಯತ್ ಹೇಳಿಕೆ ಮೂಲೆಸುದ್ದಿಯಾಗಿ ಮುಗಿದುಹೋಯಿತು. ಈ ಧೈರ್ಯದ ಮೇಲೆಯೇ ನಮ್ಮ ದೇಶದ ಉದ್ದಗಲಕ್ಕೂ ನೂರು– ಸಾವಿರ ಟಿಕಾಯತರು ತಮ್ಮ ಗಂಡಸುತನದ ದರ್ಪ ತೋರುತ್ತಿರುವುದು. ಮತ್ತು ಈ ದರ್ಪದಿಂದಾಗಿಯೇ ಹೆಣ್ಣು ಶಿಶು ಜನನದ ಪ್ರಮಾಣದಲ್ಲಿ ಇಳಿಕೆಯಾಗುತ್ತ ಸಾಗಿರುವುದು. ಇಂಥವರ ಭಯದಿಂದಲೇ ತಾಯಂದಿರು ತಮ್ಮ ಹೆಣ್ಣುಮಕ್ಕಳೊಡನೆ ಆತ್ಮಹತ್ಯೆಗೆ ಶರಣಾಗಿ ಇಲ್ಲವಾಗುತ್ತಿರುವುದು. ಇಂಥವರನ್ನು ವಿಚಾರಣೆಗೆ ಒಳಪಡಿಸದೆ, ಶಿಕ್ಷಿಸದೆ, ದಂಡನೆ ವಿಧಿಸದೆ ‘ಬೇಟಿ ಬಚಾವೋ ಬೇಟಿ ಪಢಾವೋ’ ಘೋಷಣೆಗಳನ್ನು ಕೂಗಿದರೆ ಪ್ರಯೋಜನವೇನು? ‘ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಕೊಡಬೇಕು ಅನ್ನುವುದಾದರೆ, ಅವರ ಹುಟ್ಟನ್ನೇ ಅಡಗಿಸುತ್ತೇವೆ’ ಅನ್ನುವವರಿಂದ ಮೊದಲು ‘ಬೇಟಿ’ಯರನ್ನು ಕಾಪಾಡಬೇಕು. ‘ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಷ್ಟು ಓದಿಸುವುದೇ ಇಲ್ಲ’ ಎಂದು ಮೀಸೆ ತಿರುಗಿಸುವವರ ಬಾಯಿ ಮುಚ್ಚಿ ಕೂರಿಸಬೇಕು.

ಆದರೆ ಇಲ್ಲಿ ಅದ್ಯಾವುದೂ ನಡೆಯುವುದಿಲ್ಲ. ಜೀವವಿಲ್ಲದ ತುಂಡು ಭೂಮಿಯ ಬಗ್ಗೆ ಮಾತನಾಡಿದರೆ ನಾವು ಕುದಿಯುತ್ತೇವೆ. ಜಡ ಸಂಕೇತಗಳಿಗೆ ಧಕ್ಕೆಯಾದರೆ ಉರಿದು ಬೀಳುತ್ತೇವೆ. ಊಟದ ತಟ್ಟೆಯನ್ನು ಮುಂದಿಟ್ಟುಕೊಂಡು ಕಿತ್ತಾಡುತ್ತೇವೆ. ಸಿನಿಮಾಗಳಿಗಾಗಿ ಹೊಡೆದಾಡುತ್ತೇವೆ. ಆದರೆ ಸಜೀವ ಹೆಣ್ಣಿನ ವಿಷಯಕ್ಕೆ ಬಂದಾಗ ಮಾತ್ರ ಈ ಯಾವ ಭಾವೋದ್ವೇಗವೂ ನಮ್ಮಲ್ಲಿ ಮೂಡಲಾರವು.

ಇಲ್ಲಿನ ಮತ್ತೊಂದು ದುರಂತವೆಂದರೆ, ಗಂಡಸರು ಪ್ರತಿಕ್ರಿಯೆ ತೋರದ ಹೊರತು ಯಾವ ಸಂಗತಿಯೂ ಸುದ್ದಿ ಅಥವಾ ಚರ್ಚೆಯಾಗದೆ ಹೋಗುವುದು. ಮತ್ತು ಗಂಡಸರು, ಹೆಣ್ಣುಭ್ರೂಣ ಹತ್ಯೆಯಂಥ ವಿಷಯಗಳು ಹೆಂಗಸರೇ ಪ್ರತಿಕ್ರಿಯಿಸಬೇಕಾದ ಸಂಗತಿ ಎಂದು ಸುಮ್ಮನಿರುವುದು. ಹಾಗೂ, ಹೆಂಗಸರು ಯಾವುದಕ್ಕೆ ಪ್ರತಿಕ್ರಿಯಿಸಬೇಕು ಅನ್ನುವುದನ್ನೂ ಪರೋಕ್ಷವಾಗಿ ನಿರ್ದೇಶಿಸುವುದು. ಇತ್ತೀಚಿನ ಉದಾಹರಣೆಯನ್ನೆ ನೋಡೋಣ; ನರೇಶ್ ಟಿಕಾಯತ್ ಹೇಳಿಕೆ ಹೊರಬಿದ್ದ ದಿನಗಳಲ್ಲೇ ಮನೋಹರ್ ಪರ‍್ರಿಕರ್, ಹೆಣ್ಣುಮಕ್ಕಳು ಬಿಯರ್ ಕುಡಿಯಲು ಶುರು ಮಾಡಿರುವುದು ತಮಗೆ ಆತಂಕ ತಂದಿದೆ ಎಂದು ಹೇಳಿಕೆ ಕೊಟ್ಟಿದ್ದರು. ಅದಾಗಿ ಮೂರು ದಿನಕ್ಕೆ ವಸ್ತ್ರವಿನ್ಯಾಸಕ ಸಬ್ಯಸಾಚಿ ಮುಖರ್ಜಿ, ಹೆಣ್ಣುಮಕ್ಕಳು ಮತ್ತು ಸೀರೆಯುಡುವ ಸಂಸ್ಕೃತಿಯ ಬಗ್ಗೆ ಅಸಂಬದ್ಧ ಕಮೆಂಟ್ ಮಾಡಿದ್ದರು. ಬಿಯರ್ ಮತ್ತು ಸೀರೆಯ ವಿಷಯಗಳು ಸಾಕಷ್ಟು ವೇದಿಕೆಗಳಲ್ಲಿ ಚರ್ಚೆಗೆ ಬರುವಂತೆ ನೋಡಿಕೊಳ್ಳಲಾಯಿತು. ಇವುಗಳ ಅಬ್ಬರದಲ್ಲಿ ಟಿಕಾಯತ್ ಹೇಳಿಕೆಯು ಹೇಳಹೆಸರಿಲ್ಲವಾಗಿ ಕೊಚ್ಚಿಹೋಯಿತು.

ಈ ಎಲ್ಲ ವಿದ್ಯಮಾನ ನೋಡುವಾಗ ಅನ್ನಿಸುತ್ತದೆ; ಆರ್ಥಿಕ ಸಮೀಕ್ಷೆಯು 6.3 ಕೋಟಿ ಹೆಣ್ಣುಮಕ್ಕಳು ಮಿಸ್ಸಿಂಗ್ ಎಂದು ವರದಿ ಕೊಟ್ಟಿದೆ. ವಾಸ್ತವದಲ್ಲಿ, ದೈಹಿಕವಾಗಿ ಗೋಚರಿಸುವ ಎಲ್ಲ ಹೆಣ್ಣುಗಳೂ ಅಸ್ತಿತ್ವದಲ್ಲೇನೂ ಇಲ್ಲ. ಅಲ್ಲಿ ಕೊಡಲಾಗಿರುವುದು ಗಂಡು ದೇಹಗಳಿಗೆ ಕೊರತೆ ಬೀಳುತ್ತಿರುವ ಹೆಣ್ಣು ದೇಹಗಳ ಸಂಖ್ಯೆಯನ್ನಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.