ADVERTISEMENT

ಪರ್ರೀಕರ್‌ಗೆ ಅನಾರೋಗ್ಯ: ಬಜೆಟ್‌ ಅಧಿವೇಶನ ಮೊಟಕು

ಪರ್ರೀಕರ್ ಅನುಪಸ್ಥಿತಿ: ಸದನ ನಾಯಕರಾಗಿ ಫ್ರಾನ್ಸಿಸ್ ಡಿಸೋಜಾ ಆಯ್ಕೆ

ಪಿಟಿಐ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST
ಪರ್ರೀಕರ್‌ಗೆ ಅನಾರೋಗ್ಯ: ಬಜೆಟ್‌ ಅಧಿವೇಶನ ಮೊಟಕು
ಪರ್ರೀಕರ್‌ಗೆ ಅನಾರೋಗ್ಯ: ಬಜೆಟ್‌ ಅಧಿವೇಶನ ಮೊಟಕು   

ಪಣಜಿ, ಗೋವಾ : ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅನಾರೋಗ್ಯದ ಕಾರಣ ಗೋವಾ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ನಾಲ್ಕು ದಿನಕ್ಕೆ ಕಡಿತಗೊಳಿಸಲಾಗಿದೆ. ಸೋಮವಾರ (ಫೆ.19) ಆರಂಭವಾಗಿರುವ ಅಧಿವೇಶನ ಫೆ. 22ರವರೆಗೆ ನಡೆಯಲಿದೆ. ಕೊನೆಯ ದಿನ ಬಜೆಟ್ ಮಂಡನೆಯಾಗಲಿದೆ.

ಮಾರ್ಚ್‌ ಮಧ್ಯಭಾಗದವರೆಗೂ ಅಧಿವೇಶನ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು.

ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಗೋವಾ ವಿಧಾನಸಭೆಯ ಸದನ ನಾಯಕರನ್ನಾಗಿ ಹಿರಿಯ ಸದಸ್ಯ ಫ್ರಾನ್ಸಿಸ್ ಡಿಸೋಜಾ ಅವರನ್ನು ಶಾಸಕಾಂಗ ಸಭೆ ಸೋಮವಾರ ಆಯ್ಕೆ ಮಾಡಿದೆ.

ADVERTISEMENT

ಡಿಸೋಜಾ ಅವರು ಶಾಸಕಾಂಗ ಪಕ್ಷದ ಹಿರಿಯ ಸದಸ್ಯರಾಗಿದ್ದು, ಪರ್ರೀಕರ್ ಅವರು ಚಿಕಿತ್ಸೆ ಮುಗಿಸಿ ವಾಪಸಾಗುವವರೆಗೆ ಸದನದಲ್ಲಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಗೋವಾ ಬಿಜೆಪಿ ಘಟಕದ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಹೇಳಿದ್ದಾರೆ.

ಮೈತ್ರಿಕೂಟದ ಹಿರಿಯ ಸದಸ್ಯ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಸಚಿವ ಸುದಿನ್ ಧವಲಿಕರ್ ಅವರು ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಪರ್ರೀಕರ್ ಪರವಾಗಿ ಇವರು ಆಯವ್ಯಯ ಮಂಡಿಸಲಿದ್ದಾರೆ.

ಸುಳ್ಳು ಸುದ್ದಿ–ಪತ್ರಕರ್ತ ವಶಕ್ಕೆ:

ಮುಖ್ಯಮಂತ್ರಿ ಅನಾರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ ಸಂಬಂಧ ಸ್ಥಳೀಯ ಪತ್ರಕರ್ತ ಹರೀಶ್ ವೋಲ್ವೈಕರ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಗತ್ಯಬಿದ್ದರೆ ಅಮೆರಿಕಕ್ಕೆ ಸ್ಥಳಾಂತರ

ಫೆ. 15ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಾಗಿರುವ ಪರ್ರೀಕರ್ ಅವರು ಮೇದೋಜೀಕರದ ಉರಿಯೂತಕ್ಕೆ (ಪ್ಯಾಂಕ್ರಿಯಾಟೈಟಿಸ್) ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಅಗತ್ಯ ಬಿದ್ದರೆ ಪರ್ರೀಕರ್ ಅವರಿಗೆ ಅಮೆರಿಕದಲ್ಲಿ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗುವುದು’ ಎಂದು ಗೋವಾ ಡೆಪ್ಯುಡಿ ಸ್ಪೀಕರ್ ಮೈಕೆಲ್ ಲೋಬೊ ಹೇಳಿದ್ದಾರೆ.

‘ನಮಗೆ ಅವರು ಬೇಕು. ಹೀಗಾಗಿ ಸಾಧ್ಯವಿರುವ ಎಲ್ಲ ಯತ್ನವನ್ನೂ ಮಾಡುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಯವರು ಚೇತರಿಸಿಕೊಳ್ಳುತ್ತಿದ್ದು, ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಬಿಜೆಪಿ ಘಟಕದ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಹೇಳಿದ್ದಾರೆ.

ಪರ್ರೀಕರ್ ಅನಾರೋಗ್ಯದ ಕಾರಣ ಅಧಿವೇಶನವು ಮೂರ್ನಾಲ್ಕು ದಿನ ಮೊದಲೇ ಮುಕ್ತಾಯವಾಗುವ ಸಾಧ್ಯತೆಯಿದೆ.

ವೆಂಕಯ್ಯ ನಾಯ್ಡು ಭೇಟಿ:

ಲೀಲಾವತಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪರ್ರೀಕರ್ ಆರೋಗ್ಯ ವಿಚಾರಿಸಿದರು. ಇಬ್ಬರೂ ಸುಮಾರು 15 ನಿಮಿಷ ಮಾತುಕತೆ ನಡೆಸಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.