ADVERTISEMENT

ಪ್ರಾಣಿ ಹಿಂಸೆ ತಡೆ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ಅಂಕಿತ

ಕಂಬಳ, ಹೋರಿ ಬೆದರಿಸುವ ಸ್ಪರ್ಧೆ ನಿರಾತಂಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 4:55 IST
Last Updated 20 ಫೆಬ್ರುವರಿ 2018, 4:55 IST

ನವದೆಹಲಿ: ಕರಾವಳಿ ಜಿಲ್ಲೆಗಳ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆಯು ಕಳೆದ ನವೆಂಬರ್‌ 17ರಂದು ಅಂಗೀಕರಿಸಿದ್ದ ಪ್ರಾಣಿ ಹಿಂಸೆ ತಡೆ (ತಿದ್ದುಪಡಿ) ಮಸೂದೆ– 2017ಕ್ಕೆ ರಾಷ್ಟ್ರಪತಿಯವರ ಅಂಕಿತ ದೊರೆತಿದೆ.

ಫೆಬ್ರುವರಿ 10ರಂದು ತಿದ್ದುಪಡಿ ಮಸೂದೆಗೂ ರಾಷ್ಟ್ರಪತಿಯವರು ಅಂಕಿತ ದೊರೆತಿದೆ. ಸೋಮವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕೇಂದ್ರದ ಗೃಹ ಸಚಿವಾಲಯವು ಇದನ್ನು ಖಚಿತಪಡಿಸಿದೆ.

ಕಳೆದ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾಗಿದ್ದ ಈ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿಯವರು ಹಿಂದಕ್ಕೆ ಕಳುಹಿಸಿದ್ದರಿಂದ ಕೆಲವು ಬದಲಾವಣೆಗಳೊಂದಿಗೆ ಮತ್ತೆ ಅಂಕಿತಕ್ಕೆ ಕಳುಹಿಸಲಾಗಿತ್ತು.

ADVERTISEMENT

ಕೋಣಗಳನ್ನು ಓಡಿಸುವ ಕ್ರೀಡೆಯಾದ ಕಂಬಳ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯವಾಗಿರುವ ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಸುಗ್ರೀವಾಜ್ಞೆಗೂ ರಾಷ್ಟ್ರಪತಿಯವರ ಅಂಕಿತ ದೊರತಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಸ್ವಯಂ ಸೇವಾ ಸಂಘಟನೆಯಾದ ಪೆಟಾ ಇಂಡಿಯಾ, ಕಂಬಳ ಕ್ರೀಡೆಯಲ್ಲಿ ಭಾಗವಹಿಸುವ ಕೋಣಗಳನ್ನು ಹಿಂಸಿಸುವುದರಿಂದ ಅವಕಾಶ ನೀಡಬಾರದು ಎಂದು ಕೋರಿತ್ತು.

ತಮಿಳುನಾಡಿನಲ್ಲಿ ಆಚರಣೆಯಲ್ಲಿರುವ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರಿಂದ ಅಲ್ಲಿನ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಅವಕಾಶ ಕಲ್ಪಿಸಿತ್ತು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿತ್ತು.

ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ದೊರೆತಿರುವುದರಿಂದ ಕಂಬಳ ಮತ್ತು ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಎದುರಾಗಿದ್ದ ಆತಂಕ ದೂರವಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.