ADVERTISEMENT

‘ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವಲ್ಲಿ ಅವ್ಯವಹಾರ’

ಹೊಸ ಆಯುರ್ವೇದ ವೈದ್ಯಕೀಯ ಕಾಲೇಜು...

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST

ನವದೆಹಲಿ: ಮೂಲ ಸೌಲಭ್ಯ ಇಲ್ಲದಿದ್ದರೂ ದೇಶದಾದ್ಯಂತ ಆಯುರ್ವೇದ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಲಾಗುತ್ತಿದೆ. ಕರ್ನಾಟಕ, ಕೇರಳ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಅನುಮತಿ ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಸೆಂಟ್ರಲ್‌ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ)ನ ಮಾಜಿ ಅಧ್ಯಕ್ಷ ಡಾ.ವೇದಪ್ರಕಾಶ ತ್ಯಾಗಿ ಆರೋಪಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಇಂತಹ ಅನೇಕ ಕಾಲೇಜುಗಳಿಗೆ ಅನುಮತಿ ನೀಡಲಾಗಿದ್ದು, ಅಲ್ಲೆಲ್ಲ ಶೈಕ್ಷಣಿಕ ಸೌಲಭ್ಯಗಳೇ ಇಲ್ಲ ಎಂದು ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

2012ರಲ್ಲಿ ದೇಶದಲ್ಲಿ 270 ಆಯುರ್ವೇದ ವೈದ್ಯಕೀಯ ಕಾಲೇಜುಗಳಿದ್ದವು. ಈಗ ಆ ಸಂಖ್ಯೆ 450 ಕ್ಕೆ ಹೆಚ್ಚಿದೆ. ಆ ಪೈಕಿ ಕರ್ನಾಟಕದಲ್ಲಿಯೇ 74 ಕಾಲೇಜುಗಳಿವೆ. ಹೊಸ ಕಾಲೇಜು ಆರಂಭಿಸಲು ಅನುಮತಿ ಕೋರಿದಲ್ಲಿ ಪರಿಶೀಲನಾ ಪ್ರಕ್ರಿಯೆಗೆ ಕನಿಷ್ಠ 5ರಿಂದ 6 ತಿಂಗಳ ಅವಧಿ ಬೇಕಾಗುತ್ತದೆ. ಆದರೆ, ಕೇವಲ ಒಂದೇ ವಾರದಲ್ಲಿ ಅನುಮತಿ ನೀಡಿರುವ ನಿದರ್ಶನಗಳಿವೆ. ಇದರ ಹಿಂದೆ ಭಾರಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ADVERTISEMENT

ಕರ್ನಾಟಕ ಮತ್ತು ಕೇರಳದಲ್ಲಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜುಗಳಿಗೆ ನಿಯಮಬದ್ಧವಾಗಿ ಅನುಮತಿ ನೀಡಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸಿಸಿಐಎಂ ಮುಖ್ಯಸ್ಥೆ ಡಾ.ವನಿತಾ ಮುರಳಿಕುಮಾರ್ ಅವರು ಅಂದಾಜು ₹ 200 ಕೋಟಿ ಮೊತ್ತದ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಇವರ ಜೊತೆಗೆ ಕೇಂದ್ರದ ಆಯುಷ್ ಸಚಿವಾಲಯದ ಉನ್ನತ ಅಧಿಕಾರಿಗಳೂ ಕೈ ಜೋಡಿಸಿದ್ದಾರೆ. ವನಿತಾ ಅವರ ಅಧಿಕಾರವಧಿ ಪೂರ್ಣಗೊಂಡಿದ್ದರೂ ಅವರನ್ನು ಸರ್ಕಾರ ಮುಂದುವರಿಸಿದೆ ಎಂದು ಹೇಳಿದ ಅವರು, ಅಕ್ರಮದ ಕುರಿತು ಸಂಪೂರ್ಣ ತನಿಖೆ ನಡೆಸುವ ಮೂಲಕ ಆಯುರ್ವೇದ ಶಿಕ್ಷಣದ ಗುಣಮಟ್ಟ ಕಾಪಾಡಬೇಕು ಎಂದು ಆಗ್ರಹಿಸಿದರು.

ವನಿತಾ ಅವರು ಈ ಹಿಂದೆಯೂ ನಕಲಿ ಶೈಕ್ಷಣಿಕ ದಾಖಲೆ ನೀಡುವ ಮೂಲಕ ಸಿಸಿಐಎಂ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಮದ್ರಾಸ್‌ ಹೈಕೋರ್ಟ್‌ ಆಗ ಅವರ ನೇಮಕಾತಿಯನ್ನು ರದ್ದುಗೊಳಿಸಿತ್ತು. ಆ ಆದೇಶವನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿಹಿಡಿದಿತ್ತು ಎಂದು ಅವರು ವಿವರಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆಯುರ್ವೇದ, ಯುನಾನಿ ಮತ್ತಿತರ ಭಾರತೀಯ ವೈದ್ಯಕೀಯ ಪದ್ಧತಿಗಳ ಉತ್ತೇಜನಕ್ಕೆ ಕ್ರಮ ಕೈಗೊಂಡಿದೆ. ಅಂತೆಯೇ ಹೊಸ ಕಾಲೇಜುಗಳಿಗೆ ಅನುಮತಿ ನೀಡಲಾಗುತ್ತಿದೆ. ಆದರೆ, ಮೂಲ ಸೌಲಭ್ಯವನ್ನೇ ಪರಿಗಣಿಸುತ್ತಿಲ್ಲ. ಕೆಲವು ಕಡೆ ಬೋಧಕ, ಬೋಧಕೇತರ ಸಿಬ್ಬಂದಿಯೇ ಇಲ್ಲದೆ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಹೇಳಿದರು.

ಸಿಸಿಐಎಂನ ರಾಜ್ಯ ಸದಸ್ಯರಾದ ಡಾ. ಆನಂದ್, ಡಾ.ಮಹಾವೀರ್ ಹಾವೇರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.