ADVERTISEMENT

ಹೋಬಳಿ ಮಟ್ಟದಲ್ಲಿ ಜನೌಷಧ ಕೇಂದ್ರ

ಬಡ ಜನತೆಗೆ ಕಡಿಮೆ ದರದಲ್ಲಿ ಔಷಧಿ: ಸಚಿವ ಅನಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST

ನವದೆಹಲಿ: ‘ಬಡ ಜನತೆಗೆ ಕಡಿಮೆ ದರದಲ್ಲಿ ಔಷಧಿ ದೊರೆಯಬೇಕು’ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ದೇಶದಾದ್ಯಂತ ಕೇವಲ 99 ಜನೌಷಧಿ
ಕೇಂದ್ರಗಳು ಅಸ್ತಿತ್ವದಲ್ಲಿದ್ದವು. 2014ರ ನಂತರ ಸರ್ಕಾರವು ಅಭಿಯಾನ ಆರಂಭಿ ಸಿದ್ದರಿಂದ ಅವುಗಳ ಸಂಖ್ಯೆ ಇದೀಗ 3,177ಕ್ಕೆ ತಲುಪಿದೆ ಎಂದು ಅವರು ತಿಳಿಸಿದರು.

ಮೊದಲು ಈ ಕೇಂದ್ರಗಳಲ್ಲಿ 150 ಮಾದರಿಯ ಔಷಧಿಗಳು ಮಾತ್ರ ಲಭ್ಯವಿದ್ದರೆ, ಈಗ 600ಕ್ಕೂ ಅಧಿಕ ಸಂಖ್ಯೆಯ ಔಷಧಿಗಳು ದೊರೆಯುತ್ತಿವೆ. ಜೊತೆಗೆ 150ಕ್ಕೂ ಅಧಿಕ ಆರೋಗ್ಯ ಸಂಬಂಧಿ ಸಲಕರಣೆಗಳು ಲಭ್ಯವಿವೆ. ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟದ ಖಾತರಿ ಹೊಂದಿರುವ ಔಷಧಿಯನ್ನೇ ಜನೌಷಧ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ADVERTISEMENT

ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿ ಲಭ್ಯ ಇರುವುದರಿಂದ ಬಡ ಕುಟುಂಬಗಳ ಮೇಲಿನ ವೈದ್ಯಕೀಯ ವೆಚ್ಚದ ಹೊರೆ ಶೇ 90ರಷ್ಟು ತಗ್ಗಿದೆ. ದೇಶದ ಎಲ್ಲ ರಾಜ್ಯಗಳ 550 ಜಿಲ್ಲೆಗಳಲ್ಲಿ ಜನೌಷಧಿ ಕೇಂದ್ರಗಳು ಕಾರ್ಯ ನಿರ್ವಹಿ ಸುತ್ತಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಈ ಕೇಂದ್ರ ತೆರೆಯಲಾಗುವುದು ಎಂದು ಅವರು ತಿಳಿಸಿದರು.

ಹೃದ್ರೋಗಿಗಳಿಗೆ ಅಳವಡಿಸುವ ಬೇರ್‌ ಮೆಟಲ್‌ ಸ್ಟೆಂಟ್‌ ಮತ್ತು ಡ್ರಗ್‌ ಎಲುಟಿಂಗ್‌ ಸ್ಟೆಂಟ್‌ಗಳ ದರವನ್ನೂ ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರ ನಿಯಂತ್ರಿಸುವ ಮೂಲಕ ಬಡಜನತೆಗೆ ಅನುಕೂಲ ಕಲ್ಪಿಸಿದ್ದು, ಆಸ್ಪತ್ರೆಗಳಲ್ಲಿ ಅಧಿಕ ಬೆಲೆ ವಿಧಿಸುವುದನ್ನು ತಪ್ಪಿಸಿದೆ. ಕೆಲವು ಆಸ್ಪತ್ರೆಗಳಲ್ಲಿ ಸ್ಟೆಂಟ್‌ಗಳ ದರ ಕಡಿಮೆ ಮಾಡಿದ್ದರೂ ಚಿಕಿತ್ಸೆ, ಅಳವಡಿಕೆ ವೆಚ್ಚವನ್ನು ಹೆಚ್ಚಿಸಿ ವಂಚಿಸುತ್ತಿದ್ದವು. ಅಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ ಆರು ತಿಂಗಳ ಹಿಂದೆ ಇದ್ದ ಚಿಕಿತ್ಸೆ ಮತ್ತು ಅಳವಡಿಕೆ ದರವನ್ನೇ ಆಕರಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.