ADVERTISEMENT

‘ಮಕ್ಕಳ ನೀಲಿಚಿತ್ರ’ ದಂಧೆ ಪತ್ತೆ

ವಾಟ್ಸ್‌ಆ್ಯಪ್‌ ಮೂಲಕ ವಿಡಿಯೊ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:33 IST
Last Updated 22 ಫೆಬ್ರುವರಿ 2018, 19:33 IST
‘ಮಕ್ಕಳ ನೀಲಿಚಿತ್ರ’ ದಂಧೆ ಪತ್ತೆ
‘ಮಕ್ಕಳ ನೀಲಿಚಿತ್ರ’ ದಂಧೆ ಪತ್ತೆ   

ನವದೆಹಲಿ: ಮಕ್ಕಳನ್ನು ಬಳಸಿ ಕೊಂಡಿರುವ ನೀಲಿ ಚಿತ್ರಗಳು ಮತ್ತು ಚಿತ್ರಗಳನ್ನು ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಹಂಚಿಕೊಳ್ಳುತ್ತಿದ್ದ ಜಾಗತಿಕ ದಂಧೆಯೊಂದನ್ನು ಸಿಬಿಐ ಭೇದಿಸಿದೆ. ಹಣಕ್ಕಾಗಿ ಈ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿತ್ತೇ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ದಂಧೆಯನ್ನು ನಡೆಸುತ್ತಿದ್ದ ವಾಣಿಜ್ಯ ಪದವೀಧರ ನಿಖಿಲ್ ವರ್ಮಾನನ್ನು (20) ಸಿಬಿಐ ಬಂಧಿಸಿದೆ. ಆತನ ಹುಟ್ಟೂರಾದ ಉತ್ತರಪ್ರದೇಶದ ಕನೌಜ್‌ನಿಂದ ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗಿದೆ. ಈತ ವಾಟ್ಸ್‌ಆ್ಯಪ್‌ ಗುಂಪಿನ ಅಡ್ಮಿನ್ ಆಗಿದ್ದ. ಇನ್ನೂ ನಾಲ್ಕು ಮಂದಿ ಗುಂಪಿನ ಅಡ್ಮಿನ್‌ಗಳಾಗಿದ್ದು, ಎಲ್ಲರೂ ಭಾರತೀಯರು. ಅವರ ಬಂಧನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

‘ಖಚಿತ ಮಾಹಿತಿ ಮೇರೆಗೆ ತನಿಖೆ ಆರಂಭಿಸಲಾಗಿತ್ತು. ಗುಂಪಿನ ಅಡ್ಮಿನ್‌ಗಳ ಮನೆಗಳಲ್ಲಿ ದೊರೆತ ಕಂಪ್ಯೂಟರ್‌ಗಳು, ಹಾರ್ಡ್‌ಡಿಸ್ಕ್‌ಗಳು ಮತ್ತು ಫೋನ್‌ಗಳಲ್ಲಿ  ಭಾರಿ ಸಂಖ್ಯೆಯ ನೀಲಿಚಿತ್ರಗಳು ಇವೆ. ಅವೆಲ್ಲದರಲ್ಲೂ ಮಕ್ಕಳನ್ನು ಬಳಸಿಕೊಳ್ಳಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಗುಂಪು ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಭಾರತ, ಅಮೆರಿಕ, ಪಾಕಿಸ್ತಾನ, ಚೀನಾ, ಅಫ್ಗಾನಿಸ್ತಾನ, ಮೆಕ್ಸಿಕೊ, ಬ್ರೆಜಿಲ್ ಸೇರಿ ಒಟ್ಟು 19 ದೇಶಗಳವರು ಈ ಗುಂಪಿನ ಸದಸ್ಯರಾಗಿದ್ದಾರೆ. ಪ್ರಕರಣದ ಬಗ್ಗೆ ಲಭ್ಯವಿರುವ ಮಾಹಿತಿಗಳನ್ನು ಗುಂಪಿನ ಸದಸ್ಯರ ದೇಶಗಳ ತನಿಖಾ
ಸಂಸ್ಥೆಗಳ ಜತೆ ಹಂಚಿಕೊಳ್ಳಲಾಗುತ್ತದೆ. ಗುಂಪಿನ ಸದಸ್ಯರ ವಿವರಗಳನ್ನು ಕೇಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘KidsXXX’ ಎಂಬ ಹೆಸರಿನ ಗುಂಪಿನಲ್ಲಿ ಈವರೆಗೆ ಹಂಚಿಕೊಳ್ಳಲಾದ ಎಲ್ಲಾ ನೀಲಿ ಚಿತ್ರಗಳಲ್ಲೂ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಅವುಗಳಲ್ಲಿ ಹಲವು ಚಿತ್ರಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ. ನೀಲಿ ಚಿತ್ರಗಳನ್ನು ತಯಾರಿಸಿ ಈ ಗುಂಪಿಗೆ ಬೇರೆಯವರು ಮಾರಾಟ ಮಾಡುತ್ತಿದ್ದಿರಬಹುದು ಎಂದು ಸಿಬಿಐ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.