ADVERTISEMENT

ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹ

ಪಿಟಿಐ
Published 23 ಫೆಬ್ರುವರಿ 2018, 10:20 IST
Last Updated 23 ಫೆಬ್ರುವರಿ 2018, 10:20 IST
ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹ
ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹ   

ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಪೊಲೀಸ್‌ ತಂಡ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸಕ್ಕೆ ತೆರಳಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.

ಮುಖ್ಯ ಕಾರ್ಯದರ್ಶಿ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸಿ.ಸಿ ಟಿ.ವಿ ದೃಶ್ಯಗಳು ಸೇರಿದಂತೆ ಎಲ್ಲಾ ಬಗೆಯ ಪುರಾವೆಗಳನ್ನು ಸಂಗ್ರಹಿಸಲು ಸಿಎಂ ನಿವಾಸಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಉತ್ತರ ದೆಹಲಿಯ ಹೆಚ್ಚುವರಿ ಡಿಸಿಪಿ ಹರೀಂದರ್ ಸಿಂಗ್ ತಿಳಿಸಿದ್ದಾರೆ.

‘ನನ್ನ ನಿವಾಸಕ್ಕೆ ಒಂದು ದೊಡ್ಡ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ಮುಖ್ಯಮಂತ್ರಿಯ ಇಡೀ ನಿವಾಸವನ್ನು ಹುಡುಕಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

60ರಿಂದ 70 ಪೊಲೀಸರು ಮುಖ್ಯಮಂತ್ರಿ ಕಚೇರಿಗೆ ಬಂದಿದ್ದಾರೆ. ಆದರೆ, ಈ ವೇಳೆ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ. ಯಾವುದೆ ಮಾಹಿತಿ ನೀಡದೆ ಸಿಎಂ ಸಿವಾಸಕ್ಕೆ ಬಂದು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ ಎಂದು ದೆಹಲಿ ಸರ್ಕಾರದ ವಕ್ತಾರ ಅರುಣೋದಯ್‌ ಪ್ರಕಾಶ್‌ ಹೇಳಿದ್ದಾರೆ.

ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಸೋಮವಾರ ರಾತ್ರಿ ಅಂಶು ಪ್ರಕಾಶ್‌ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ‍್ರಕರಣಕ್ಕೆ ಸಂಬಂಧಿಸಿ ಆಮ್‌ ಆದ್ಮಿ ಪಕ್ಷದ(ಎಎಪಿ) ಶಾಸಕ ಪ್ರಕಾಶ್‌ ಜರ್ವಾಲ್‌ ಹಾಗೂ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲಹೆಗಾರ ವಿ.ಕೆ. ಜೈನ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.