ADVERTISEMENT

63 ಮಂದಿ ವಿಚಾರಣೆ: ಸುಪ್ರೀಂಗೆ ವರದಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಹತ್ತು ದೂರ ಸಂಪರ್ಕ ಸೇವೆ ಒದಗಿಸುವ ಕಂಪೆನಿಗಳ ಸಿಇಒಗಳು, ಪ್ರವರ್ತಕರು ಸೇರಿದಂತೆ ಒಟ್ಟು 63 ಜನರನ್ನು ವಿಚಾರಣೆಗೆ ಗುರಿ ಪಡಿಸಲಾಗಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೇಂದ್ರ ಸರ್ಕಾರ ಕೂಡ ಆರೋಪಿ ಸ್ಥಾನದಲ್ಲಿರುವ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಿ.ಎಸ್ ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಸಿಬಿಐ ನಡೆಸುತ್ತಿರುವ ತನಿಖೆಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. 

 ‘ಈ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಕೇಂದ್ರ ಕಾನೂನು ಸಚಿವರು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ವಿಚಾರ ಇನ್ನು ಪರಿಶೀಲನೆಯಲ್ಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದ್ರ ಜೈಸಿಂಗ್ ಪೀಠಕ್ಕೆ ತಿಳಿಸಿದ್ದಾರೆ. 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ಪ್ರಗತಿಯಲ್ಲಿದೆ ಎಂದಿರುವ ಸಿಬಿಐ ಪರ ವಕೀಲ ಕೆ.ಕೆ. ವೇಣುಗೋಪಾಲ್, ತನಿಖೆಯ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.

ಈ ಪ್ರಕರಣದ ತನಿಖೆಯು ಯಾವ ಹಂತದಲ್ಲಿದೆ ಎಂಬುದರ ಕುರಿತು ಮಾ. 10ರೊಳಗೆ ವರದಿ ಸಲ್ಲಿಸುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪೀಠವು ಸೂಚಿಸಿತ್ತು. ಈಗ ವರದಿ ಸಲ್ಲಿಕೆಯಾಗಿರುವುದರಿಂದ ಮುಂದಿನ ವಿಚಾರಣೆಯನ್ನು ಮಾ. 15ಕ್ಕೆ ಮುಂದೂಡಿದೆ. ಸಿಬಿಐ ವಿಚಾರಣೆಗೆ ಒಳಪಡಿಸಿದವರ ಪಟ್ಟಿಯಲ್ಲಿ ಅನೇಕ ಹೆಸರಾಂತ ಕಾರ್ಪೊರೇಟ್ ಉದ್ದಿಮೆಗಳು ಮತ್ತು ಇವುಗಳ ಮುಖ್ಯಸ್ಥರ ಹೆಸರು ಇರುವುದನ್ನು ಗಮನಿಸಿದ ಪೀಠವು, ‘ಅನೇಕರು ತಾವು ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇವೆ ಎಂದು ಕೊಂಡಿದ್ದಾರೆ. ಆದರೆ, ಕಾನೂನನ್ನು ಉಲ್ಲಂಘಿಸಿದವರು ಎಷ್ಟೇ ಧನಿಕರಾದರೂ ಸರಿ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದಿದೆ.

ಆದರೆ ಈ ಹಗರಣದ ತನಿಖೆ ನಡೆಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಸಿಪಿಐಎಲ್ ಪರವಾಗಿ ವಕಾಲತ್ತು ವಹಿಸಿರುವ ಪ್ರಶಾಂತ್ ಭೂಷಣ್,  ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗುಂಪಿನ ಸ್ವಾನ್ ಟೆಕ್ನಾಲಜಿ ಕಂಪೆನಿಯ ಮುಖ್ಯಸ್ಥರನ್ನು ತನಿಖಾ ಸಂಸ್ಥೆ ಪ್ರಶ್ನಿಸಿಲ್ಲ ಎಂದು ಬೊಟ್ಟು ಮಾಡಿದರು. ಈ ಕಂಪೆನಿಯ ಮುಖ್ಯಸ್ಥರಿಗೆ ಸಮನ್ಸ್ ಜಾರಿಯಾಗದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಪೀಠವು, ‘ತನಿಖೆ ನಡೆಸಲು ಸಿಬಿಐ ಸರ್ವಸ್ವಂತ್ರವಾಗಿರುವಾಗ ಅದನ್ನು ಮೊಟಕು ಮಾಡುವುದೇಕೆ? ಪ್ರಭಾವಿ ವ್ಯಕ್ತಿಗಳನ್ನು ವಿಚಾರಣೆಗೆ ಗುರಿ ಪಡಿಸಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ’ ಎಂದು ಸೂಚಿಸಿತು.

‘ಸದ್ಯ ತನಿಖೆಯಿಂದ ಉಪಲಬ್ಧವಾಗಿರುವ ವರದಿಯನ್ನು ಗಮನಿಸಿದರೆ ಬಂಧನಕ್ಕೆ ಒಳಗಾಗಿರುವ ದೂರ ಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಸೇರಿದಂತೆ ನಾಲ್ವರು ವ್ಯಕ್ತಿಗಳು ಈ ಅವ್ಯವಹಾರದ ಫಲಾನುಭವಿಗಳಾಗಿದ್ದರೆ ಎಂದು ಮೇಲ್ನೋಟಕ್ಕೆ ಎನಿಸುತ್ತದೆ. ಇವರು ಈ ಹಗರಣದ ಸಂಚಿನಲ್ಲಿ ಎಷ್ಟರ ಮಟ್ಟಿಗೆ ಭಾಗಿಯಾಗಿದ್ದಾರೆ ಎಂಬುದನ್ನು ಪೀಠ ತಿಳಿಯಲು ಬಯಸುತ್ತದೆ’ ಎಂದು ನ್ಯಾಯಾಮೂರ್ತಿಗಳು ಸಿಬಿಐಗೆ ನಿರ್ದೇಶಿಸಿದರು.

ಟಾಟಾ  ಕಂಪೆನಿಯ ಪರವಾಗಿ ವಕಾಲತ್ತು ವಹಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ಪ್ರಕರಣದ ವಿಚಾರಣೆಯನ್ನು ಚೀತ್ರಿಕರಣ ಮಾಡಬೇಕು ಎಂದು ಪೀಠವನ್ನು ಕೋರಿದರು.
ಫೆ. 10ರಂದು ನಡೆದ ವಿಚಾರಣೆಯಲ್ಲಿ ಈ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಯಾವುದೇ ಪ್ರಭಾವಕ್ಕೆ ಒಳಗಾಗದೆ ಅವರ ವಿರುದ್ಧ ವಿಚಾರಣೆ ನಡೆಸುವಂತೆ ಸಿಬಿಐಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್, ಈ ಪ್ರಕಣವನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ವಿಶೇಷ ನ್ಯಾಯಾಲಯ ರಚಿಸುವಂತೆ ಸಹ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜಾ ವಿಚಾರಣೆಗೆ ಅಸ್ತು
ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಎ.ರಾಜಾ ಅವರ ವಿಚಾರಣೆಯನ್ನು ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲು ದೆಹಲಿಯ ಕೋರ್ಟ್ ಅನುಮತಿ ನೀಡಿದೆ. ಜೈಲಿನಲ್ಲಿರುವವರೆಗೆ ತಮ್ಮ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಆರೋಪಿ ಎ.ರಾಜಾ ಅವರ ಪರವಾಗಿ ವಕೀಲ ರಮೇಶ್ ಗುಪ್ತಾ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಸಮ್ಮತಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಮೂರ್ತಿ ಒ.ಪಿ. ಸೈನಿ, ‘ಆರೋಪಿತರು ಇರುವ ತಿಹಾರ್ ಜೈಲು ಮತ್ತು ವಿಚಾರಣೆ ನಡೆಯುವ ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶವಿರುವುದರಿಂದ ಮತ್ತು ಹೀಗೆ ನಡೆಸುವುದಕ್ಕೆ ಸಿಬಿಐನಿಂದ ಯಾವುದೇ ವಿರೋಧ ಇಲ್ಲದ ಕಾರಣ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು’ ಎಂದಿದ್ದಾರೆ. ತಮ್ಮ ಕಕ್ಷಿದಾರರ ಭದ್ರತೆಯ ದೃಷ್ಟಿಯಿಂದಲು ಸಹ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವುದು ಸೂಕ್ತವಾಗಿತ್ತು ಎಂದು ಗುಪ್ತಾ ಹೇಳಿದ್ದಾರೆ. ಫೆ. 2ರಂದು ಬಂಧಿತರಾದ ಎ.ರಾಜಾ ಅವರನ್ನು ತಿಹಾರ್ ಜೈಲಿನಲ್ಲಿ ಮಾ. 3ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.