ADVERTISEMENT

ಇಂಧನದ ಶೇ 68ರಷ್ಟು ತೆರಿಗೆ ಕೇಂದ್ರಕ್ಕೆ, ಬೆಲೆ ಏರಿಕೆ ದೂಷಣೆ ರಾಜ್ಯಕ್ಕೆ: ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 5:24 IST
Last Updated 28 ಏಪ್ರಿಲ್ 2022, 5:24 IST
   

ನವದೆಹಲಿ: ಇಂಧನದ ಮೇಲಿನ ತೆರಿಗೆಯ ಶೇ 68ರಷ್ಟು ಭಾಗವನ್ನು ಕೇಂದ್ರವೇ ತೆಗೆದುಕೊಳ್ಳುತ್ತಿದ್ದರೂ, ಮೋದಿ ಅವರು ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯಗಳನ್ನು ದೂಷಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಪೆಟ್ರೋಲ್‌ ಮತ್ತು ಡೀಸೆಲ್‌ನ ಬೆಲೆ ಏರಿಕೆಯ ಹೊರೆಯನ್ನು ಜನರ ಮೇಲಿಂದ ಇಳಿಸಲು ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕವನ್ನು ಇಳಿಸಿತ್ತು. ರಾಜ್ಯಗಳೂ ತಮ್ಮ ಪಾಲಿನ ತೆರಿಗೆಯನ್ನು ಕಡಿತ ಮಾಡುವಂತೆ ಕೋರಿಕೊಂಡಿದ್ದೆವು. ಕೆಲವು ರಾಜ್ಯಗಳು ತೆರಿಗೆ ಕಡಿತ ಮಾಡಿದ್ದವು. ಕೆಲವು ರಾಜ್ಯಗಳು ತೆರಿಗೆ ಕಡಿತ ಮಾಡದೆ, ಅದರ ಲಾಭವನ್ನು ಜನರಿಗೆ ನೀಡಿಲ್ಲ. ಈ ಮೂಲಕ, ಆ ರಾಜ್ಯಗಳು ತಮ್ಮ ನಾಗರಿಕರಿಗೆ ಅನ್ಯಾಯ ಮಾಡಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅರೋಪಿಸಿದ್ದರು.

ಪ್ರಧಾನಿ ಅವರ ಈ ಆರೋಪಕ್ಕೆ ತಿರುಗೇಟು ನೀಡಿರುವ ರಾಹುಲ್‌ ಗಾಂಧಿ, ‘ ಇಂಧನ ಬೆಲೆ ಏರಿಕೆಗೆ ರಾಜ್ಯಗಳನ್ನು ದೂಷಿಸಲಾಗುತ್ತದೆ, ಕಲ್ಲಿದ್ದಲು ಕೊರತೆಗೂ ರಾಜ್ಯಗಳನ್ನು ದೂರಲಾಗುತ್ತದೆ, ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಎದುರಾದರೂ ರಾಜ್ಯಗಳನ್ನೇ ದೂರಲಾಗುತ್ತದೆ. ಇಂಧನದ ಮೇಲಿನ ಶೇ 68 ರಷ್ಟು ತೆರಿಗೆಯನ್ನು ಕೇಂದ್ರವೇ ತೆಗೆದುಕೊಳ್ಳುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ’ ಎಂದು ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮೋದಿಯವರ ಒಕ್ಕೂಟ ವ್ಯವಸ್ಥೆಯು ಸಹಕಾರಿಯಲ್ಲ, ದಬ್ಬಾಳಿಕೆಯಿಂದ ಕೂಡಿದೆ ಎಂದೂ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.