ADVERTISEMENT

ವೈದ್ಯರ ಮೇಲಿನ ಹಲ್ಲೆಗೆ ಏಳು ವರ್ಷಗಳ ಸಜೆ

ಅಪರಾಧಿಗಳಿಗೆ ಏಳು ವರ್ಷ ಸಜೆಗೆ ಅವಕಾಶ: ಕೇಂದ್ರ ಸಂಪುಟ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 20:00 IST
Last Updated 22 ಏಪ್ರಿಲ್ 2020, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆರೋಗ್ಯ ರಕ್ಷಣೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದನ್ನು ಜಾಮೀನುರಹಿತ ಅ‍ಪರಾಧ ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಕಾಯ್ದೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಪ‍್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಈ ನಿರ್ಧಾರ ಕೈಗೊಂಡಿದೆ. ಅಪರಾಧಿಗಳಿಗೆ ಏಳು ವರ್ಷದವರೆಗೆ ಸಜೆ ವಿಧಿಸುವ ಅಂಶವೂ ಸುಗ್ರೀವಾಜ್ಞೆಯಲ್ಲಿ ಸೇರಿದೆ.

ಕೋವಿಡ್‌–19ರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ತಾರತಮ್ಯದಿಂದ ನೋಡುವುದು, ಅವರ ಮೇಲೆ ಹಲ್ಲೆ ನಡೆಸುವುದು ಮುಂತಾದ ಪ್ರಕರಣಗಳು ದೇಶದ ಹಲವೆಡೆ ಇತ್ತೀಚೆಗೆ ವರದಿಯಾಗಿವೆ. ಇದನ್ನು ಖಂಡಿಸಿ ಗುರುವಾರ ‘ಕರಾಳ ದಿನ’ ಆಚರಿಸಲು ಆರೋಗ್ಯ ಕಾರ್ಯಕರ್ತರು ಮುಂದಾಗಿದ್ದ ಸಂದರ್ಭದಲ್ಲಿಯೇ ಸುಗ್ರೀವಾಜ್ಞೆಯ ನಿರ್ಧಾರ ಹೊರಬಿದ್ದಿದೆ.

123 ವರ್ಷ ಹಳೆಯದಾದ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ಈ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.

ADVERTISEMENT

ಆರೋಗ್ಯ ಕಾರ್ಯಕರ್ತರ ವಾಹನ ಅಥವಾ ಕ್ಲಿನಿಕ್‌ಗೆ ಹಾನಿ ಆಗಿದ್ದರೆ, ಅದರ ಮಾರುಕಟ್ಟೆ ಮೌಲ್ಯದ ಎರಡು ಪಟ್ಟು ಮೊತ್ತವನ್ನು ವಸೂಲಿ ಮಾಡಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸುಗ್ರೀವಾಜ್ಞೆಯ ಮುಖ್ಯಾಂಶಗಳು

* 30 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು

* ಅಪರಾಧಿಗೆ 3 ತಿಂಗಳಿಂದ 5 ವರ್ಷದವರೆಗೆ ಶಿಕ್ಷೆ ಮತ್ತು ₹50,000ದಿಂದ ₹2 ಲಕ್ಷವರೆಗೆ ದಂಡ ವಿಧಿಸಲು ಅವಕಾಶ

* ಸಂತ್ರಸ್ತರು ಗಂಭೀರವಾಗಿ ಗಾಯಗೊಂಡಿದ್ದರೆ 6 ತಿಂಗಳಿಂದ 7 ವರ್ಷ ಸಜೆ, ₹1 ಲಕ್ಷದಿಂದ ₹5 ಲಕ್ಷದವರೆಗೆ ದಂಡ

ರಕ್ಷಣೆ ಕೊಡಿ: ಕೇಂದ್ರ ಸೂಚನೆ

ಕಿಡಿಗೇಡಿಗಳಿಂದ ದಾಳಿಗೆ ಒಳಗಾಗುತ್ತಿರುವ ವೈದ್ಯರು ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಬುಧವಾರ ಸೂಚನೆ ನೀಡಿದೆ. ಈ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಪತ್ರ ಬರೆದಿದ್ದಾರೆ.

ಭದ್ರತೆಗೆ ಸಂಬಂಧಿಸಿದಂತೆ ವೈದ್ಯಕೀಯ ಸಿಬ್ಬಂದಿಗೆ ಎದುರಾಗುವ ಯಾವುದೇ ಸಮಸ್ಯೆಯನ್ನು ನಿವಾರಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಹೇಳಲಾಗಿದೆ.

27ರಂದು ಮೋದಿ ವಿಡಿಯೊ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆಗೆ ಇದೇ 27ರಂದು ವಿಡಿಯೊ ಕಾನ್ಫರೆನ್ಸ್‌ ನಡೆಸಲಿದ್ದಾರೆ. ಅವರ ‘ಮನದ ಮಾತು’ ಬಾನುಲಿ ಭಾಷಣ ಇದೇ 26ರಂದು ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಕೋವಿಡ್–19ರ ಬಗ್ಗೆ ವಿವರವಾಗಿ ಮಾತನಾಡುವ ನಿರೀಕ್ಷೆ ಇದೆ.

ಸುಗ್ರೀವಾಜ್ಞೆ ಮುಖ್ಯಾಂಶಗಳು

* 30 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು

* ಅಪರಾಧಿಗೆ 3 ತಿಂಗಳಿಂದ 5 ವರ್ಷದವರೆಗೆ ಶಿಕ್ಷೆ ಮತ್ತು ₹50,000ದಿಂದ ₹2 ಲಕ್ಷವರೆಗೆ ದಂಡ ವಿಧಿಸಲು ಅವಕಾಶ

* ಸಂತ್ರಸ್ತರು ಗಂಭೀರವಾಗಿ ಗಾಯಗೊಂಡಿದ್ದರೆ 6 ತಿಂಗಳಿಂದ 7 ವರ್ಷ ಸಜೆ, ₹1 ಲಕ್ಷದಿಂದ ₹5 ಲಕ್ಷದವರೆಗೆ ದಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.