ADVERTISEMENT

ರೈತರೊಂದಿಗೆ ಪಿಎಂ ಮೋದಿ ಮಾತನಾಡಿದ್ದಿದ್ದರೆ 733 ಪ್ರಾಣ ಉಳಿಸಬಹುದಿತ್ತು: ರಾಹುಲ್‌

ಪಿಟಿಐ
Published 20 ನವೆಂಬರ್ 2022, 7:31 IST
Last Updated 20 ನವೆಂಬರ್ 2022, 7:31 IST
ಮಹಾರಾಷ್ಟ್ರದ ಬುಲ್ಡಾಣಾ ಜಿಲ್ಲೆಯಲ್ಲಿ ಭಾರತ್‌ ಜೋಡೊ ಯಾತ್ರೆಯ ಸಂದರ್ಭ ವಿದ್ಯಾರ್ಥಿಗಳ ಜೊತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ | ಪಿಟಿಐ ಚಿತ್ರ
ಮಹಾರಾಷ್ಟ್ರದ ಬುಲ್ಡಾಣಾ ಜಿಲ್ಲೆಯಲ್ಲಿ ಭಾರತ್‌ ಜೋಡೊ ಯಾತ್ರೆಯ ಸಂದರ್ಭ ವಿದ್ಯಾರ್ಥಿಗಳ ಜೊತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ | ಪಿಟಿಐ ಚಿತ್ರ   

ಬುಲ್ಡಾಣಾ, ಮಹಾರಾಷ್ಟ್ರ: ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಿದ್ದರೆ 733 ಜೀವಗಳನ್ನು ಉಳಿಸಬಹುದಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿಷಾದ ವ್ಯಕ್ತಪಡಿಸಿದರು.

ಭಾರತ್‌ ಜೋಡೊ ಯಾತ್ರೆಯ ಭಾಗವಾಗಿ ಬುಲ್ಢಾಣಾ ಜಿಲ್ಲೆಯ ಭಸ್ತಾನ್ ಗ್ರಾಮದಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು. ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸುದೀರ್ಘ ಕಾಲ ನಡೆಸಿದ ಚಳುವಳಿ ವೇಳೆ ಮೃತಪಟ್ಟ ರೈತರಿಗೆ ಸಂತಾಪ ವ್ಯಕ್ತಪಡಿಸಿದರು.

ರೈತರು ಈ ರಾಷ್ಟ್ರದ ಧ್ವನಿಯಾಗಿದ್ದಾರೆ. ಕೃಷಿ ಕಾಯ್ದೆಗಳು ರೈತರ ವಿರೋಧಿಯಾಗಿದ್ದವು. ಹಾಗಾಗಿ ಅವರು ದೆಹಲಿಯ ಹೊರಭಾಗದಲ್ಲಿ ಪ್ರತಿನಭಟನೆ ನಡೆಸಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿದರು. ಕೃಷಿ ಕಾಯ್ದೆಗಳನು ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವಂತವುಗಳಾಗಿದ್ದವು ಎಂದು ರಾಹುಲ್‌ ಗಾಂಧಿ ಹೇಳಿದರು.

ADVERTISEMENT

ಕೇಂದ್ರ ಸರ್ಕಾರಕ್ಕೆ ಪೊಲೀಸರಿದ್ದಾರೆ, ಶಸ್ತ್ರಾಸ್ತ್ರಗಳಿವೆ, ಆಡಳಿತದ ಅಧಿಕಾರವಿದೆ. ಆದರೆ ರೈತರಿಗೆ ಕೇವಲ ಅವರ ಧ್ವನಿಯಿದೆ. ಈ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಚಳುವಳಿ ಸಂದರ್ಭ 733 ರೈತರು ಪ್ರಾಣ ಕಳೆದುಕೊಂಡರು ಎಂದು ಬೇಸರಿಸಿದರು.

ಸಂತಾಪ ಸೂಚಿಸುವ ವೇಳೆ ಪಟಾಕಿ: ರಾಹುಲ್‌ ಕಿಡಿ
ರಾಹುಲ್‌ ಗಾಂಧಿ ಅವರು ಭಾಷಣವನ್ನು ಕೊನೆಗೊಳಿಸುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲರೂ ಎದ್ದು ನಿಂತು ಮೃತ ರೈತರಿಗೆ ಸಂತಾಪ ಸೂಚಿದರು. ಈ ವೇಳೆ ಸಭೆಯ ಸಮೀಪದಲ್ಲೇ ಕೆಲವು ಅಪರಿಚಿತರು ಪಟಾಕಿಗಳನ್ನು ಸಿಡಿಸಿದರು. ಇದರಿಂದ ಕೋಪಗೊಂಡ ರಾಹುಲ್‌ ಗಾಂಧಿ, ಪಟಾಕಿ ಹೊಡೆದವರು ಈ ರಾಷ್ಟ್ರದ ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನವೆಂಬರ್‌ 19 ಅನ್ನು ಕಾಂಗ್ರೆಸ್ ಕಿಸಾನ್‌ ವಿಜಯ್‌ ದಿವಸ್‌ (ರೈತರ ವಿಜಯದ ದಿನ)ವನ್ನಾಗಿ ಆಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.