ADVERTISEMENT

ಮೋದಿ ವಿರುದ್ಧ ಪೋಸ್ಟರ್‌: 8 ಎಎಪಿ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 19:26 IST
Last Updated 31 ಮಾರ್ಚ್ 2023, 19:26 IST
   

ಅಹಮದಾಬಾದ್‌ (ಪಿಟಿಐ): ‘ಮೋದಿ ಹಠಾವೊ, ದೇಶ್‌ ಬಚಾವೊ’ (ಮೋದಿಯನ್ನು ಇಳಿಸಿ, ದೇಶ ಉಳಿಸಿ) ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಹಚ್ಚಿದ ಆರೋಪದಲ್ಲಿ ಎಎಪಿಯ ಎಂಟು ಕಾರ್ಯಕರ್ತರನ್ನು ಅಹಮದಾಬಾದ್‌ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬುದನ್ನು ಈ ಬಂಧನವು ಸಾಬೀತು ಮಾಡಿದೆ ಎಂದು ಎಎಪಿಯ ಗುಜರಾತ್ ಘಟಕವು ಹೇಳಿದೆ.

‘ಮೋದಿ ಹಠಾವೊ, ದೇಶ ಬಚಾವೊ’ ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಹಚ್ಚಿ ಸಾರ್ವಜನಿಕ ಸೊತ್ತಿಗೆ ಹಾನಿ ಮಾಡಿದ ಆರೋಪದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ನಗರದ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ. ಎಎಪಿ ಕಾರ್ಯಕರ್ತರು ಗುರುವಾರ ಪೋಸ್ಟರ್‌ಗಳನ್ನು ಹಚ್ಚಿದ್ದರು.

ADVERTISEMENT

ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾದ ಬಳಿಕ ಗುರುವಾರ ರಾತ್ರಿಯೇ ಈ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂಧಿತರನ್ನು ನಟವರ್‌ ಠಾಕೂರ್‌, ಜತಿನ್‌ ಪಟೇಲ್‌, ಕುಲದೀಪ್‌ ಭಟ್‌, ಬಿಪಿನ್ ಶರ್ಮಾ, ಅಜಯ್‌ ಚೌಹಾಣ್‌, ಅರವಿಂದ ಚೌಹಾಣ್‌, ಜೀವನ್‌ ಮಾಹೇಶ್ವರಿ ಮತ್ತು ಪರೇಶ್‌ ತುಳಸಿಯಾನಿ ಎಂದು ಗುರುತಿಸಲಾಗಿದೆ.

ಪಕ್ಷವು ವಿವಿಧ ರಾಜ್ಯಗಳಲ್ಲಿ ಇಂತಹ ಪೋಸ್ಟರ್‌ಗಳನ್ನು ಹಚ್ಚಿದೆ. ಆದರೆ, ಎಲ್ಲಿಯೂ ಕಾರ್ಯಕರ್ತರನ್ನು ಬಂಧಿಸಲಾಗಿಲ್ಲ. ಆದರೆ, ಗುಜರಾತ್‌ನಲ್ಲಿ ಮಾತ್ರ ಬಂಧಿಸಲಾಗಿದೆ ಎಂದು ಗುಜರಾತ್‌ ಎಎಪಿ ಘಟಕದ ಉಪಾಧ್ಯಕ್ಷ ಸಾಗರ್ ರಬರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.