ADVERTISEMENT

ಎಂಟು ಅಧಿಕಾರಿಗಳಿಂದ ಕೇಜ್ರಿವಾಲ್‌ ಸರ್ಕಾರದ ವಿರುದ್ಧ 'ಕಿರುಕುಳ’ ಆರೋಪ

ಪಿಟಿಐ
Published 21 ಮೇ 2023, 2:29 IST
Last Updated 21 ಮೇ 2023, 2:29 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಸೇರಿದಂತೆ ದೆಹಲಿ ಆಡಳಿತಾತ್ಮಕ ಅಧಿಕಾರದ ಹಂಚಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಐವರು ಐಎಎಸ್‌ ಅಧಿಕಾರಿಗಳು ಸೇರಿ ಎಂಟು ಅಧಿಕಾರಿಗಳು 'ಕಿರುಕುಳ'ದ ಆರೋಪ ಮಾಡಿದ್ದಾರೆ.

ಐಎಎಸ್ ಅಧಿಕಾರಿಗಳಾದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್, ಮಾಜಿ ಸೇವಾ ಕಾರ್ಯದರ್ಶಿ ಆಶಿಶ್ ಮೋರೆ, ವಿಶೇಷ ಕಾರ್ಯದರ್ಶಿಗಳಾದ ಕಿನ್ನಿ ಸಿಂಗ್ ಮತ್ತು ವೈವಿವಿಜೆ ರಾಜಶೇಖರ್ ಮತ್ತು ಇಂಧನ ಇಲಾಖೆ ಕಾರ್ಯದರ್ಶಿ ಶುರ್ಬೀರ್ ಸಿಂಗ್ ದೆಹಲಿ ಸರ್ಕಾರದ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ.

ಇವರುಗಳ ಜೊತೆ ಐಪಿಎಸ್‌ ಅಧಿಕಾರಿ ಮಧುರ್ ವರ್ಮಾ, ತೆರಿಗೆ ಇಲಾಖೆಯ ಮುಖ್ಯ ಮೌಲ್ಯಮಾಪಕ ಮತ್ತು ಸಂಗ್ರಾಹಕ ಕುನಾಲ್ ಕಶ್ಯಪ್, ಸೇವಾ ಇಲಾಖೆಯ ಉಪ ಕಾರ್ಯದರ್ಶಿ ಅಮಿತಾಭ್ ಜೋಶಿ ದೂರುದಾರರ ಪಟ್ಟಿಯಲ್ಲಿ ಸೇರಿದ್ದಾರೆ.

ADVERTISEMENT

'ವರ್ಷದ ಆರಂಭದಲ್ಲಿ ಎರಡು ದೂರುಗಳನ್ನು ಸ್ವೀಕರಿಸಿದ್ದೇವೆ. ಸುಪ್ರಿಂ ಕೋರ್ಟ್‌ ಸುಗ್ರೀವಾಜ್ಞೆ ಹೊರಡಿಸಿದ ನಂತರ ಅಂದರೆ ಮೇ 11ರ ನಂತರ ಆರು ದೂರುಗಳನ್ನು ಸ್ವೀಕರಿಸಲಾಗಿದೆ' ಎಂದು ರಾಜ್ಯಪಾಲರ ಕಚೇರಿ ತಿಳಿಸಿದೆ.

'ಐಎಎಸ್‌ ಅಧಿಕಾರಿ ಶುರ್ಬೀರ್ ಸಿಂಗ್ ಮತ್ತು ಮಧುರ್‌ ವರ್ಮಾ ಅವರು ಪಂಜಾಬ್‌ನಲ್ಲಿಯೂ ತಮ್ಮ ಕುಟುಂಬಗಳನ್ನು ’ಟಾರ್ಗೆಟ್’ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ , ಓಖ್ಲಾ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಕ್ರಮ ಕೈಗೊಂಡಾಗಿನಿಂದ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ವರ್ಮಾ ಆರೋಪಿಸಿದ್ದಾರೆ' ಎಂದು ರಾಜ್ಯಪಾಲರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿಗಳು ಸೇರಿ ‌ಎಂಟು ಅಧಿಕಾರಿಗಳು ಸರ್ಕಾರದ ವಿರುದ್ಧ ಕಿರುಕುಳ ಆರೋಪ ಮಾಡಿರುವ ಕುರಿತು ದೆಹಲಿ ಸರ್ಕಾರ ಇದುವೆರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 'ದೂರುಗಳನ್ನು ಪರಿಶೀಲಿಸಿದ ನಂತರವೇ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲಾಗುವುದು’ ಎಂದು ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.