ADVERTISEMENT

2 ತಿಂಗಳ ನಂತರ ಮತ್ತೆ ತಾಯಿ ಮಡಿಲು ಸೇರಿತು 9 ತಿಂಗಳ ಮಗು

ಪಿಟಿಐ
Published 7 ಜನವರಿ 2019, 2:57 IST
Last Updated 7 ಜನವರಿ 2019, 2:57 IST
   

ನವದೆಹಲಿ: ನಾಪತ್ತೆಯಾಗಿದ್ದ 9 ತಿಂಗಳ ಮಗುವೊಂದು ಎರಡು ತಿಂಗಳ ನಂತರ ಮತ್ತೆ ಹೆತ್ತವರ ಮಡಿಲು ಸೇರಿದೆ. ಮನೆಯಿಲ್ಲದ ಕಾರಣ ಬೀದಿಯಲ್ಲಿ ಮಲಗುತ್ತಿದ್ದ ಕುಟುಂಬವೊಂದರಿಂದ ಈ ಮಗುವನ್ನು ಅಪಹರಿಸಲಾಗಿತ್ತು.

ದೆಹಲಿಯ ಬಾಂಗ್ಲಾ ಸಾಹೇಬ್ ಗುರುದ್ವಾರದ ಸಮೀಪ ಫುಟ್‌ಪಾತ್ ಮೇಲೆ ಮಲಗುವ ದಿನಗೂಲಿ ಕುಟುಂಬದ ತಾಯಿ ಹೆತ್ತ ಮಗುವಿದು. ರಾತ್ರಿ ಮಡಿಲಲ್ಲಿ ಮಲಗಿದ್ದ ಮಗು ಬೆಳಿಗ್ಗೆ ಏಳುವ ಹೊತ್ತಿಗೆ ಕಣ್ಮರೆಯಾಗಿತ್ತು. ಕಣ್ಣೀರಿಡುತ್ತಾ ಊರೆಲ್ಲಾ ಹುಡುಕಿದರೂ ಪ್ರಯೋಜನವಾಗಲಿಲ್ಲ. ಮಗು ಹುಡುಕಿಕೊಡಿ ಎಂದು ಪೊಲೀಸರನ್ನು ಬೇಡಿಕೊಂಡರೂ ಫಲ ಸಿಕ್ಕಿರಲಿಲ್ಲ.

‘ನಿನ್ನ ಮಗು ಕದ್ದವರು ಪಾಲಿಕಾ ಬಜಾರ್ ಸಮೀಪ ಇದ್ದಾರೆ’ ಎಂದು ಯಾರೋ ಹೇಳಿದ್ದನ್ನು ಆ ಮಹಿಳೆ ಸೀದಾ ಪೊಲೀಸರ ಕಿವಿಗೆ ಹಾಕಿದಳು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಅಲ್ಲಿದ್ದುದು 19 ವರ್ಷದ ಯುವತಿ. ಆದರೆ ಮಗು ಮಾತ್ರ ಕಾಣಿಸಲಿಲ್ಲ. ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಆಕೆ ತಾನೇ ಮಗುವನ್ನು ಕದ್ದಿದ್ದಾಗಿ ಒಪ್ಪಿಕೊಂಡಳು.

ADVERTISEMENT

ಮಗುವನ್ನು ಬಚ್ಚಿಟ್ಟಿರುವ ಜಾಗವನ್ನೂ ಪೊಲೀಸರಿಗೆ ಆಕೆ ತಿಳಿಸಿದಳು. ‘ನನಗೆ ಮಗು ಇರಲಿಲ್ಲ, ಆ ಮಗು ಮುದ್ದಾಗಿತ್ತು.ಹೀಗಾಗಿ ಕಂದಮ್ಮನನ್ನು ಕದ್ದಿದ್ದೆ. ಮಗುವನ್ನು ಇಲ್ಲಿಯೇ ಇರಿಸಿಕೊಂಡರೆಕಷ್ಟ, ಎಂದುಅಮೃತಸರದಲ್ಲಿದ್ದ ನನ್ನ ಬಂಧುವಿಗೆ ಕೊಟ್ಟಿದ್ದೆ’ ಆಕೆ ಬಾಯ್ಬಿಟ್ಟಿದ್ದಾಳೆ. ಇದೀಗ ಮಗುವನ್ನು ಇರಿಸಿಕೊಂಡಿದ್ದ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.