ADVERTISEMENT

ಮಾಧ್ಯಮಗಳಲ್ಲೂ ಮೇಲ್ಜಾತಿಯವರದ್ದೇ ಪ್ರಾಬಲ್ಯ: ಸಮೀಕ್ಷಾ ವರದಿ ಬಿಡುಗಡೆ

ಆಕ್ಸ್‌ಫಮ್ ಇಂಡಿಯಾ –ನ್ಯೂಸ್‌ ಲಾಂಡ್ರಿ ಸಂಸ್ಥೆಯು ಸಮೀಕ್ಷಾ ವರದಿ ಬಿಡುಗಡೆ

ಪಿಟಿಐ
Published 14 ಅಕ್ಟೋಬರ್ 2022, 17:06 IST
Last Updated 14 ಅಕ್ಟೋಬರ್ 2022, 17:06 IST
   

ನವದೆಹಲಿ: ‘ಭಾರತೀಯ ಮಾಧ್ಯಮಗಳ ಉನ್ನತ ಸ್ಥಾನಗಳಲ್ಲಿ ಶೇ 90ರಷ್ಟು ಮೇಲ್ಜಾತಿಯವರೇ ಇದ್ದಾರೆ. ದಲಿತ ಅಥವಾ ಆದಿವಾಸಿಗೆ ಸೇರಿದ ಒಬ್ಬರೂ ಈ ಸ್ಥಾನದಲ್ಲಿಲ್ಲ’ ಎಂದು ಹೊಸ ಸಮೀಕ್ಷಾ ವರದಿಯು ತಿಳಿಸಿದೆ.

‘ನಮ್ಮ ಸುದ್ದಿಯನ್ನು ಯಾರು ತಿಳಿಸುತ್ತಿದ್ದಾರೆ ಎಂಬುದೂ ಮುಖ್ಯ: ಭಾರತೀಯ ಮಾಧ್ಯಮಗಳಲ್ಲಿ ನಿರ್ಲಕ್ಷ್ಯಿತ ಜಾತಿಗಳಿಗೆ ಪ್ರಾತಿನಿಧ್ಯ’ ವಿಷಯವನ್ನು ಕುರಿತ ಸಮೀಕ್ಷೆಯ ಎರಡನೇ ಆವೃತ್ತಿಯನ್ನು ಆಕ್ಸ್‌ಫಮ್ಇಂಡಿಯಾ –ನ್ಯೂಸ್‌ ಲಾಂಡ್ರಿ ಸಂಸ್ಥೆಯು ದಕ್ಷಿಣ ಭಾರತದ ಅತಿದೊಡ್ಡ ಸುದ್ದಿ ಮಾಧ್ಯಮ ವೇದಿಕೆ ‘ದ ಮೀಡಿಯಾ ರಂಬಲ್‌’ನಲ್ಲಿ ಬಿಡುಗಡೆ ಮಾಡಿದೆ.

ಈ ವರದಿಯ ಪ್ರಕಾರ, ಮುದ್ರಣ, ಟಿ.ವಿ., ಡಿಜಿಟಲ್ ಮೀಡಿಯಾ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ಶೇ 90ರಷ್ಟು ಸಾಮಾನ್ಯ ವರ್ಗ ಪ್ರತಿನಿಧಿಸುವ ಮೇಲ್ಜಾತಿಯವರೇ ಇದ್ದಾರೆ. ಪರಿಶಿಷ್ಟ ಜಾತಿ (ಎಸ್‌ಸಿ), ಪಂಗಡದ (ಎಸ್‌ಟಿ) ಒಬ್ಬರೂ ಇಲ್ಲ.

ADVERTISEMENT

ಹಿಂದಿ ಮತ್ತು ಇಂಗ್ಲಿಷ್ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ 5 ಲೇಖನಗಳಲ್ಲಿ ಮೂರನ್ನು ಮೇಲ್ಜಾತಿಯವರೇ ಬರೆದಿರುತ್ತಾರೆ. ಒಂದನ್ನು ನಿರ್ಲಕ್ಷ್ಯಿತ ಜಾತಿಗಳನ್ನು (ಎಸ್‌ಸಿ., ಎಸ್‌ಟಿ., ಒಬಿಸಿ) ಪ್ರತಿನಿಧಿಸಿರುವವರು ಬರೆದಿರುತ್ತಾರೆ.

ವೃತ್ತಪತ್ರಿಕೆಗಳು, ಟಿ.ವಿ. ನ್ಯೂಸ್‌ ಚಾನಲ್‌ಗಳು, ವೆಬ್‌ಸೈಟ್‌ಗಳು, ನಿಯತಕಾಲಿಕೆಗಳು ಒಳಗೊಂಡು 121 ಸುದ್ದಿಮನೆಗಳಲ್ಲಿ ಪ್ರಧಾನ ಸಂಪಾದಕ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೊ ಮುಖ್ಯಸ್ಥರು, ಇನ್‌ಪುಟ್/ಔಟ್‌ಪುಟ್‌ ಎಡಿಟರ್‌ಗಳ 121 ಸ್ಥಾನಗಳ ಪೈಕಿ 106 ಸ್ಥಾನಗಳಲ್ಲಿ ಮೇಲ್ಜಾತಿಯವರೇ ಇದ್ದಾರೆ. ಹಿಂದುಳಿದ ವರ್ಗಗಳ ಐವರು, ಅಲ್ಪಸಂಖ್ಯಾತ ಸಮುದಾಯದ 6 ಮಂದಿ ಇದ್ದಾರೆ. ನಾಲ್ವರ ಜಾತಿಯ ಗುರುತು ತಿಳಿದುಬಂದಿಲ್ಲ.

ನ್ಯೂಸ್ ಚಾನಲ್‌ಗಳ ಚರ್ಚೆ ನಡೆಸಿಕೊಡುವ ಆ್ಯಂಕರ್‌ಗಳಲ್ಲಿ ಪ್ರತಿ ನಾಲ್ವರಲ್ಲಿ ಮೂವರು ಮೇಲ್ಜಾತಿಯವರು. ಹಿಂದಿ ಚಾನಲ್‌ಗಳಲ್ಲಿ 40, ಇಂಗ್ಲಿಷ್ ಚಾನಲ್‌ಗಳಲ್ಲಿ 47 ಮಂದಿ ಆ್ಯಂಕರ್‌ಗಳು ಇದ್ದಾರೆ. ದಲಿತ, ಆದಿವಾಸಿ, ಒಬಿಸಿಯ ಒಬ್ಬರೂ ಆ್ಯಂಕರ್‌ಗಳಿಲ್ಲ.

ನ್ಯೂಸ್‌ ವೆಬ್‌ಸೈಟ್‌ಗಳಲ್ಲಿ ಹೆಸರಿನ ಜೊತೆಗೆ ಪ್ರಕಟವಾಗುವ ಶೇ 72 ಲೇಖನಗಳ ಬರಹಗಾರರು ಮೇಲ್ಜಾತಿಯವರು. ಸಮೀಕ್ಷೆಗೆ ಒಳಪಡಿಸಿದ 12 ನಿಯತಕಾಲಿಕಗಳ ಮುಖಪುಟಗಳ 972 ಲೇಖನಗಳಲ್ಲಿ 10 ಲೇಖನಗಳ ವಿಷಯ ಜಾತಿಗೆ ಸಂಬಂಧಿಸಿದ್ದಾಗಿತ್ತು.

43 ವೃತ್ತಪತ್ರಿಕೆಗಳು, ಟಿ.ವಿ, ಡಿಜಿಟಲ್‌ ಮಾಧ್ಯಮ ಸಂಸ್ಥೆಗಳು, ಅವುಗಳು ಪ್ರಕಟಿಸಿದ ವರದಿಗಳು, ಪ್ರಮುಖ ಸ್ಥಾನಗಳಲ್ಲಿ ಇರುವವರ ಸಾಮಾಜಿಕ ಸ್ಥಿತಿಯನ್ನು ಆಧರಿಸಿದೆ. 2,075 ಪ್ರೈಮ್‌ಟೈಂ ಚರ್ಚೆಗಳು, 76 ಆ್ಯಂಕರ್‌ಗಳ ಜಾತಿ, ಚರ್ಚೆಗಳಲ್ಲಿ ಪಾಲ್ಗೊಂಡಿದ್ದ 3,318 ಜನರ ಜಾತಿ, 12 ತಿಂಗಳ ಅವಧಿಯ ಆನ್‌ಲೈನ್‌ ಸುದ್ದಿ ಪ್ರಸಾರ, ಏಪ್ರಿಲ್‌ 2021 ಮತ್ತು ಮಾರ್ಚ್ 2022 ನಡುವೆ ನಿಯತಕಾಲಿಕೆಗಳು, ವೃತ್ತಪತ್ರಿಕೆಗಳಲ್ಲಿ ಪ್ರಕಟವಾದ 20,000 ಲೇಖನಗಳನ್ನು ಸಮೀಕ್ಷೆಯು ಆಧರಿಸಿದೆ.

ಸುದ್ದಿಗೆ ನೀಡಲಾದ ಪ್ರಾಮುಖ್ಯತೆ, ಆಯ್ಕೆ ಮಾಡಿಕೊಂಡಿರುವ ವಿಷಯ ವಸ್ತು, ಆ್ಯಂಕರ್‌ಗಳು ಮತ್ತು ಚರ್ಚೆಗಳಲ್ಲಿ ಭಾಗಿಯಾದವರ ಸಾಮಾಜಿಕ ಸ್ಥಿತಿಯನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ಆಕ್ಸ್‌ಫಮ್‌ ಇಂಡಿಯಾದ ಸಿಇಒ ಅಮಿತಾಬ್ ಬೆಹರ್ ಅವರು, ಮೂರು ವರ್ಷಗಳಲ್ಲಿ ಬಿಡುಗಡೆ ಆಗುತ್ತಿರುವ ನಮ್ಮ ಎರಡನೇ ವರದಿಯಿಂದ ಸುದ್ದಿಮನೆಗಳಲ್ಲಿ ನಿರ್ಲಕ್ಷ್ಯಿತ ವರ್ಗಗಳು ಸೇರ್ಪಡೆ ಆಗಿಲ್ಲ ಎಂಬುದು ತಿಳಿಯಲಿದೆ. ಮಾಧ್ಯಮ ಸಂಸ್ಥೆಗಳ ಪ್ರಮುಖರು ಸುದ್ದಿಮನೆಗಳಲ್ಲಿ ದಲಿತರು, ಆದಿವಾಸಿಗಳ, ಬಹುಜನರು ಇರಬಹುದಾದ ವಾತಾವರಣ ಸೃಷ್ಟಿಸಲು ವಿಫಲವಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.