ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದ ನೇರ ಪ್ರಸಾರದ ಹಕ್ಕು ಪಡೆದಿದ್ದ ಎಸ್‌ಐಎಸ್ ಲೈವ್/ಜೂಮ್ ಕಮ್ಯುನಿಕೇಷನ್ ಖಾಸಗಿ ಪ್ರಸಾರ ಸಂಸ್ಥೆಗೆ ನೀಡಬೇಕಾಗಿದ್ದ 98.4 ಕೋಟಿ ರೂಪಾಯಿ ಹಣವನ್ನು ಪ್ರಸಾರ ಭಾರತಿ ತಡೆಹಿಡಿದಿದೆ.
ನೇರ ಪ್ರಸಾರದ ಒಡಂಬಡಿಕೆ ಉಲ್ಲಂಘನೆ ಮತ್ತು ಅವ್ಯವಹಾರಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ನೇಮಕ ಮಾಡಲಾಗಿದ್ದ ಉನ್ನತಾಧಿಕಾರಿ ಸಮಿತಿ ಮಾಡಿದ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಲೋಕಸಭೆಗೆ ತಿಳಿಸಿದರು.
ನೇರ ಪ್ರಸಾರದ ಹಕ್ಕು ಪಡೆದ ಖಾಸಗಿ ಪ್ರಸಾರ ಕಂಪೆನಿಗೆ ಹೆಚ್ಚುವರಿ ಹಣ ಪಾವತಿಯಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಿ ಕಾರ್ಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದರು.
ಅವ್ಯವಹಾರದಲ್ಲಿ ದೂರದರ್ಶನ ಪ್ರಧಾನ ನಿರ್ದೇಶಕ ಅರುಣಾ ಶರ್ಮಾ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.ಪ್ರಸಾರ ಭಾರತಿ ಮುಖ್ಯ ಅಧಿಕಾರಿಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಸೋನಿ ಮಂಗಳವಾರ ಲೋಕಸಭೆಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.