ADVERTISEMENT

ಆಫ್ತಾಬ್‌ ಸುಳ್ಳು ಪತ್ತೆ ಪರೀಕ್ಷೆ ಇಂದು ಮುಕ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2022, 4:31 IST
Last Updated 28 ನವೆಂಬರ್ 2022, 4:31 IST
   

ದೆಹಲಿಯ ಶ್ರದ್ಧಾ ವಾಲಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಫ್ತಾಬ್‌ ಪೂನಾವಾಲಾ ಸುಳ್ಳು ಪತ್ತೆ ಪರೀಕ್ಷೆ ಇಂದು ಮುಕ್ತಾಗೊಳ್ಳುವ ನಿರೀಕ್ಷೆಯಿದ್ದು, ಸೋಮವಾರ ಅಥವಾ ಮಂಗಳವಾರ ಮಂಪರು ಪರೀಕ್ಷೆ ನಡೆಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.


ತನ್ನ ಪ್ರೇಯಸಿ ಶ್ರದ್ಧಾ ವಾಲಕರ್‌ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಆಫ್ತಾಬ್‌ ಪೂನಾವಾಲಾನನ್ನು ಈಗಾಗಲೇ ಒಂದು ಸಲ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೆಲ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ದೊರೆಯದ ಕಾರಣ ನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇಂದು ಮತ್ತೊಂದು ಸುತ್ತಿನ ಪರೀಕ್ಷೆ ನಡೆಯಲಿದೆ.


ಸುಳ್ಳು ಪತ್ತೆ ಪರೀಕ್ಷೆ ಸೋಮವಾರ ಮುಕ್ತಾಯಗೊಂಡರೆ ಸೋಮವಾರ ಅಥವಾ ಮಂಗಳವಾರ ಅಫ್ತಾಬ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT


‘ವಾರಾಂತ್ಯದಲ್ಲಿ ಕೂಡ ಪ್ರಯೋಗಾಲಯ ಪರೀಕ್ಷೆಗಾಗಿ ತೆರೆದಿತ್ತು. ಸೋಮವಾರ ಪರೀಕ್ಷೆಗಾಗಿ ಆಫ್ತಾಬ್‌ನನ್ನು ಪ್ರಯೋಗಾಲಯಕ್ಕೆ ಕರೆ ತರಲು ಅನುಮತಿ ಸಿಕ್ಕಿರುವುದಾಗಿ ತನಿಖಾ ತಂಡ ಖಚಿತಪಡಿಸಿದೆ. ಮಂಪರು ಪರೀಕ್ಷೆಗೆ ಕೂಡ ಸಿದ್ಧತೆ ನಡೆದಿದೆ’ ಎಂದು ಪ್ರಯೋಗಾಲಯದ ಸಹಾಯಕ ನಿರ್ದೇಶಕ ಸಂಜೀವ್‌ ಗುಪ್ತಾ ಹೇಳಿದ್ದಾರೆಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.


ಈಗಾಗಲೇ ಪೂನಾವಾಲಾನನ್ನು ಪೊಲೀಸರು ಕೆಲ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಆದಾಗ್ಯೂ ಆತನಿಂದ ಯಾವುದೇ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಇನ್ನಷ್ಟು ಪರೀಕ್ಷೆ ಅನಿವಾರ್ಯ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.