ADVERTISEMENT

ಸರ್ಕಾರದ ಹಣದಲ್ಲಿ ‍ಪಕ್ಷದ ಜಾಹೀರಾತು: ಎಎಪಿಗೆ ₹163.62 ಕೋಟಿಯ ವಸೂಲಿ ನೋಟಿಸ್

10 ದಿನಗಳಲ್ಲಿ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 13:03 IST
Last Updated 12 ಜನವರಿ 2023, 13:03 IST
ಅರವಿಂದ ಕೇಜ್ರಿವಾಲ್‌ (ಸಾಂಕೇತಿಕ ಚಿತ್ರ)
ಅರವಿಂದ ಕೇಜ್ರಿವಾಲ್‌ (ಸಾಂಕೇತಿಕ ಚಿತ್ರ)   

ನವದೆಹಲಿ: ಸರ್ಕಾರಿ ಜಾಹೀರಾತಿನ ಹೆಸರಿನಲ್ಲಿ ಪಕ್ಷ ಹಾಗೂ ತನ್ನ ನಾಯಕರಿಗೆ ಪ್ರಚಾರ ಒದಗಿಸಲು ಕೋಟ್ಯಂತರ ಮೊತ್ತ ವಿನಿಯೋಗಿಸಲಾಗಿದ್ದು, ಬಡ್ಡಿ ಸಮೇತ ಒಟ್ಟು ₹163.62 ಕೋಟಿ ಹಿಂತಿರುಗಿಸುವಂತೆ ದೆಹಲಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯವು (ಡಿಐಪಿ) ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಗುರುವಾರ ನೋಟಿಸ್‌ ಜಾರಿಗೊಳಿಸಿದೆ. ಇದು ಬಿಜೆಪಿ ಹಾಗೂ ಎಎಪಿ ನಾಯಕರ ನಡುವಣ ವಾಕ್ಸಮರಕ್ಕೆ ಕಾರಣವಾಗಿದೆ.

ರಾಜಕೀಯ ಜಾಹೀರಾತು ನೀಡುವುದಕ್ಕಾಗಿ ಎಎಪಿಯು ₹97 ಕೋಟಿ ಮೊತ್ತ ವಿನಿಯೋಗಿಸಿದ್ದು, ಅದನ್ನು ವಸೂಲಿ ಮಾಡುವಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಅದಾಗಿ ಒಂದು ತಿಂಗಳ ನಂತರ ಡಿಐಪಿಯು ₹163.62 ಕೋಟಿ ಮೊತ್ತ ವಸೂಲಿ ಸಂಬಂಧ ನೋಟಿಸ್‌ ನೀಡಿದೆ.

ರಾಜಕೀಯ ಜಾಹೀರಾತಿಗಾಗಿ ₹99.31 ಕೋಟಿ ವಿನಿಯೋಗಿಸಲಾಗಿದ್ದು, ಇದಕ್ಕೆ ಬಡ್ಡಿಯೇ ₹64.31 ಕೋಟಿ ಆಗಲಿದೆ. ಈ ಮೊತ್ತಗಳನ್ನು ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ADVERTISEMENT

‘ಎಎಪಿಯು ಪಕ್ಷ ಹಾಗೂ ತನ್ನ ನಾಯಕರಿಗೆ ಪ್ರಚಾರ ನೀಡುವುದಕ್ಕಾಗಿ ಸರ್ಕಾರದ ಹಣ ಬಳಸಿಕೊಂಡಿದೆ. ಹೀಗಾಗಿ ಪಕ್ಷದ ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಬೇಕು. ಜೊತೆಗೆ ಆ ಪಕ್ಷದ ನಾಯಕರ ಆಸ್ತಿ ಜಪ್ತಿ ಮಾಡಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

‘₹163.62 ಕೋಟಿ ಮೊತ್ತ ಹಿಂತಿರುಗಿಸುವಂತೆ ಡಿಐಪಿ ನೋಟಿಸ್‌ ನೀಡಿರುವುದು ಕಾನೂನಿಗೆ ವಿರುದ್ಧವಾದುದು. ಇದು ನಿರಂಕುಶತೆಗೆ ಸಾಕ್ಷಿಯಂತಿದೆ. ನಮ್ಮ ನಾಯಕರಿಗೆ ಸಂಬಂಧಿಸಿದ ರಾಜಕೀಯ ಜಾಹೀರಾತುಗಳ ಪ್ರತಿಗಳನ್ನು ಡಿಐಪಿ ಒದಗಿಸಲಿ’ ಎಂದು ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್‌ ಗುಪ್ತಾ ದೂರಿದ್ದು, ಈ ಕುರಿತು ಡಿಐಪಿಗೆ ಪತ್ರವನ್ನೂ ಬರೆದಿದ್ದಾರೆ.

‘ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಹೊರ ರಾಜ್ಯಗಳಲ್ಲಿನ ಪತ್ರಿಕೆಗಳಿಗೆ ನೀಡಿರುವ ಜಾಹೀರಾತು ಮೊತ್ತ ವಸೂಲಿ ಮಾಡುವ ಸಂಬಂಧ ನೋಟಿಸ್‌ ಜಾರಿಗೊಳಿಸುವಂತೆ ಬಿಜೆಪಿಯು ಡಿಐಪಿಯ ಕಾರ್ಯದರ್ಶಿ ಅಲೈಸ್ ವಾಜ್‌ ಅವರಿಗೆ ಸೂಚಿಸಿದೆ. ಆ ಮೂಲಕ ಸರ್ಕಾರಿ ಅಧಿಕಾರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಆರೋಪಿಸಿದ್ದಾರೆ.

‘ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ದೆಹಲಿ ಆವೃತ್ತಿಯ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ. ದೆಹಲಿಯ ವಿವಿಧೆಡೆ ಹೋರ್ಡಿಂಗ್‌ಗಳನ್ನೂ ಅಳವಡಿಸಲಾಗಿದೆ. ಆ ಮೊತ್ತವನ್ನು ಸಂಬಂಧಪಟ್ಟ ಮುಖ್ಯಮಂತ್ರಿಗಳಿಂದ ವಸೂಲಿ ಮಾಡಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

ಹಣ ಪಾವತಿಗೆ 10 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಪಕ್ಷದ ಸಂಚಾಲಕರು ಹಣ ಪಾವತಿಸಲು ವಿಫಲರಾದರೆ ಆಸ್ತಿ ಜಪ್ತಿ ಮಾಡುವುದೂ ಸೇರಿದಂತೆ ಕಾನೂನಿನ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.