ADVERTISEMENT

ಕೋರ್ಟ್ ಮೇಲ್ವಿಚಾರಣೆಯಲ್ಲಿ ಎಂಸಿಡಿ ಮೇಯರ್ ಚುನಾವಣೆ: ಸುಪ್ರೀಂ ಕೋರ್ಟ್‌ಗೆ ಎಎಪಿ

ಪಿಟಿಐ
Published 6 ಫೆಬ್ರುವರಿ 2023, 13:12 IST
Last Updated 6 ಫೆಬ್ರುವರಿ 2023, 13:12 IST
   

ನವದೆಹಲಿ: ಮೇಯರ್ ಆಯ್ಕೆ ಮೂರನೇ ಬಾರಿಯೂ ನಡೆಯದೆ ದೆಹಲಿ ಮಹಾನಗರ ಪಾಲಿಕೆ ಕಲಾಪ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಯಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಎಎಪಿ ನಾಯಕಿ ಅತಿಶಿ ಮಾರ್ಲೆನಾ ಹೇಳಿದ್ದಾರೆ.

ನಾಮನಿರ್ದೇಶಿತ ಸದಸ್ಯರಿಗೂ ಮತದಾನಕ್ಕೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಸೋಮವಾರ ನಡೆದ ಚುನಾವಣೆ ಸಂದರ್ಭ ಗದ್ದಲ ನಡೆದು ಮೇಯರ್ ಆಯ್ಕೆ ಆಗಲಿಲ್ಲ.

ಬೆಳಿಗ್ಗೆ 11.30ಕ್ಕೆ ದೆಹಲಿ ಮಹಾನಗರ ಪಾಲಿಕೆಯ(ಎಂಸಿಡಿ) ಕಲಾಪ ಆರಂಭವಾಗುತ್ತಿದ್ದಂತೆ ಚುನಾವಣಾಧಿಕಾರಿ ಸತ್ಯ ಶರ್ಮಾ, ನಾಮ ನಿರ್ದೇಶಿತ ಸದಸ್ಯರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು. ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಒಂದೇ ಬಾರಿಗೆ ನಡೆಯಲಿದೆ ಎಂದು ಹೇಳಿದರು.

ADVERTISEMENT

ಇದರಿಂದ ಅಸಮಾಧಾನಗೊಂಡ ಎಎಪಿ ಸದಸ್ಯರು ಪ್ರತಿಭಟನೆ ನಡೆಸಿದರು. ನಾಮ ನಿರ್ದೆಶಿತ ಸದಸ್ಯರು ಮತದಾನ ಮಾಡುವಂತಿಲ್ಲ ಎಂದು ಎಎಪಿ ಸದಸ್ಯ ಮುಕೇಶ್ ಗೋಯಲ್ ಹೇಳಿದರು.

ಕಲಾಪದಿಂದ ಹೊರಬಂದ ಬಳಿಕ ಮಾತನಾಡಿದ ಅತಿಶಿ,‘ಮೇಯರ್ ಆಯ್ಕೆ ಚುನಾವಣೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯಬೇಕೆಂದು ಒತ್ತಾಯಿಸಿ ನಾವು ಇಂದೇ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಹೇಳಿದರು.

ಜನವರಿ 6 ಮತ್ತು 24ರಂದು ನಡೆದ ಕಲಾಪದ ಸಂದರ್ಭದಲ್ಲೂ ಬಿಜೆಪಿ ಮತ್ತು ಎಎಪಿ ಸದಸ್ಯರು ಗದ್ದಲ ನಡೆಸಿದ್ದರಿಂದ ಮೇಯರ್ ಆಯ್ಕೆ ನಡೆದಿರಲಿಲ್ಲ.

ದೆಹಲಿ ಮಹಾನಗರ ಪಾಲಿಕೆ(ಡಿಎಂಸಿ) ಕಾಯ್ದೆ, 1957ರ ಪ್ರಕಾರ, ಚುನಾವಣೆ ನಡೆದ ಬಳಿಕ ಮೊದಲ ಕಲಾಪದಲ್ಲೇ ಮೇಯರ್ ಮತ್ತು ಉಪಮೇಯರ್ ಆಯ್ಕೆ ಆಗಬೇಕು. ಆದರೆ, ಚುನಾವಣೆ ನಡೆದು ಎರಡು ತಿಂಗಳು ಕಳೆದಿದ್ದರೂ ದೆಹಲಿಗೆ ನೂತನ ಮೇಯರ್ ಆಯ್ಕೆ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.