ADVERTISEMENT

ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗೆ ಏಕರೂಪ ನಿಯಮ

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಜಾರಿ ತರಲು ಒಪ್ಪಂದ

ಪಿಟಿಐ
Published 25 ಮೇ 2019, 19:34 IST
Last Updated 25 ಮೇ 2019, 19:34 IST
   

ನವದೆಹಲಿ:ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್‌ ಭಾರತ್‌–ಪ್ರಧಾನ್‌ ಮಂತ್ರಿ ಜನ ಆರೋಗ್ಯ ಯೋಜನಾ (ಎಬಿ–ಪಿಎಂಜೆಎವೈ) ಅಡಿ, ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗೆ ಏಕರೂಪದ ನಿಯಮಗಳನ್ನು ರೂಪಿಸುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಮತ್ತು ರಾಷ್ಟ್ರೀಯ ಕ್ಯಾನ್ಸರ್‌ ಗ್ರಿಡ್‌ (ಎನ್‌ಸಿಜಿ) ಒಪ್ಪಂದಕ್ಕೆ ಸಹಿ ಹಾಕಿವೆ.

ದೇಶದಾದ್ಯಂತ ಇರುವ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು, ರೋಗಿಗಳ ಗುಂಪು ಹಾಗೂ ಚಾರಿಟೇಬಲ್‌ ಟ್ರಸ್ಟ್‌ಗಳ ನಡುವೆ ಒಂದು ಜಾಲ ಸೃಷ್ಟಿಸುವ ಉದ್ದೇಶದಿಂದ ಸರ್ಕಾರವು ಈ ಎನ್‌ಸಿಜಿ ರಚಿಸಿದೆ. ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ಸೇವೆಗಳನ್ನು ಒಂದೇ ವೇದಿಕೆಗೆ ತಂದು, ಸಮೂಹದ ಸಹಕಾರವನ್ನು ವೃದ್ಧಿಪಡಿಸುವ ಕೆಲಸವನ್ನು ಎನ್‌ಎಚ್‌ಎ ಮತ್ತು ಎನ್‌ಸಿಜಿ ಮಾಡುತ್ತಿವೆ.

ಎಬಿ–ಪಿಎಂಜೆಎವೈ ಅಡಿ ಈ ಸೇವೆಗಳನ್ನು ನೀಡುವ ಉದ್ದೇಶದಿಂದ ಉಭಯ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಎರಡು ಸಂಸ್ಥೆಗಳ ಅಧಿಕಾರಿಗಳು ದೆಹಲಿಯಲ್ಲಿ ಇತ್ತೀಚೆಗೆ ಭೇಟಿ ಮಾಡಿ, ಸಹಭಾಗಿತ್ವದ ಕುರಿತು ಚರ್ಚೆ ನಡೆಸಿವೆ.

ADVERTISEMENT

‘ಕ್ಯಾನ್ಸರ್‌ ಪತ್ತೆ, ಚಿಕಿತ್ಸೆ, ಕ್ಯಾನ್ಸರ್‌ ಚಿಕಿತ್ಸೆ ನೀಡುವವರಿಗೆ ವಿಶೇಷ ತರಬೇತಿ ಮತ್ತು ಶಿಕ್ಷಣ, ಮೂಲ, ಸುಧಾರಿತ ಹಾಗೂ ಚಿಕಿತ್ಸಾತ್ಮಕ ಸಂಶೋಧನೆಯ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಏಕರೂಪದ ನಿಯಮ ರೂಪಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ‘ ಎಂದು ಪ್ರಕಟಣೆ ಹೇಳಿದೆ.

ವರ್ಷಕ್ಕೆ ₹5 ಲಕ್ಷ ವಿಮೆ

ಪಿಎಂಜೆಎವೈ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಎರಡು ಮತ್ತು ಮೂರನೇ ಮಟ್ಟದ ತೀವ್ರತೆಯ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವ ಕುಟುಂಬವೊಂದಕ್ಕೆ ₹5 ಲಕ್ಷದವರೆಗೆ ವಿಮಾ ಸೌಲಭ್ಯ ದೊರಕುತ್ತದೆ. ಸದ್ಯ, 10.74 ಕೋಟಿ ಸಂತ್ರಸ್ತ ಕುಟುಂಬಗಳಿಗೆ (50 ಕೋಟಿ ಫಲಾನುಭವಿಗಳು) ಈ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ.

**

ಎನ್‌ಸಿಜಿ ಜತೆಗಿನ ಒಪ್ಪಂದ ಸಂತಸ ತಂದಿದೆ. ಎಬಿ–ಪಿಎಂಜೆಎವೈ ಯೋಜನೆಯಡಿ ಕ್ಯಾನ್ಸರ್‌ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಈ ಒಪ್ಪಂದ ಸಹಕಾರಿಯಾಗಲಿದೆ
- ಇಂದು ಭೂಷಣ್‌,ಎನ್‌ಎಚ್‌ಎ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.