
ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಗ್ಯಾಂಗ್‌ಸ್ಟರ್ ಅಬು ಸಲೇಂಗೆ ಪೊಲೀಸರ ಬೆಂಗಾವಲಿನೊಂದಿಗೆ ಕೇವಲ ಎರಡು ದಿನಗಳ ತುರ್ತು ಪೆರೋಲ್ ನೀಡಬಹುದು ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.
ಮೃತಪಟ್ಟ ತನ್ನ ಅಣ್ಣನ ಅಂತಿಮ ವಿಧಿ–ವಿಧಾನದಲ್ಲಿ ಭಾಗಿಯಾಗಲು ಸಲೇಂ 14 ದಿನ ತುರ್ತು ಪೆರೋಲ್ ನೀಡುವಂತೆ ಮನವಿ ಮಾಡಿದ್ದರು.
‘ಅಂತರರಾಷ್ಟ್ರೀಯ ಅಪರಾಧಿಯಾಗಿರುವ ಕಾರಣ ಸಲೇಂಗೆ 14 ದಿನ ಪೆರೋಲ್ ನೀಡಲು ಸಾಧ್ಯವಿಲ್ಲ. ಹೀಗಾಗಿ ಜೈಲು ಅಧಿಕಾರಿಗಳು, ಪೊಲೀಸರ ಬೆಂಗಾವಲಿನೊಂದಿಗೆ ಸಲೇಂಗೆ ಕೇವಲ ಎರಡು ದಿನ ಪೆರೋಲ್ ನೀಡಬಹುದು. ಅದರ ವೆಚ್ಚವನ್ನು ಆತನೇ ಭರಿಸಬೇಕು’ ಎಂದು ಸರ್ಕಾರದ ಪರ ವಕೀಲರಾದ ಮಂಕುವಾರ್ ದೇಶಮುಖ್ ಅವರು ಪೀಠಕ್ಕೆ ತಿಳಿಸಿದರು.
‘ಉತ್ತರ ಪ್ರದೇಶದ ಆಜಮ್‌ಗಢಕ್ಕೆ ಪ್ರಯಾಣಿಸಬೇಕಾಗಿರುವುದರಿಂದ ಎರಡು ದಿನ ಸಾಕಾಗುವುದಿಲ್ಲ. ಸಲೇಂಗೆ ಯಾವುದೇ ಪೊಲೀಸರ ಬೆಂಗಾವಲಿನ ಅವಶ್ಯಕತೆಯಿಲ್ಲ. ಆತ ಕೂಡ ಭಾರತೀಯ ಪ್ರಜೆ. 20 ವರ್ಷದಿಂದ ಜೈಲಿನಲ್ಲಿದ್ದಾರೆ. ಈಗ ತುರ್ತು ಪೆರೋಲ್ ಕೇಳುತ್ತಿದ್ದಾರೆ’ ಎಂದು ಸಲೇಂ ಪರ ವಕೀಲರು ತಿಳಿಸಿದ್ದಾರೆ.
ಸಲೇಂಗೆ 14 ದಿನ ಪೆರೋಲ್ ನೀಡದಿರಲು ಕಾರಣವನ್ನು ತಿಳಿಸುವ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ತಿಳಿಸಿದ ನ್ಯಾಯಮೂರ್ತಿ ಅಜಯ್ ಗಡ್ಕರಿ ಮತ್ತು ಶ್ಯಾಮ್ ಚಂದಕ್ ಅವರ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.