ADVERTISEMENT

ಮಥುರಾ ಬಳಿ ಅಪಘಾತ: ಕಾರಿನಡಿ ಸಿಲುಕಿ 10 ಕಿ.ಮೀ ಸಾಗಿದ ಮೃತದೇಹ

ಪಿಟಿಐ
Published 7 ಫೆಬ್ರುವರಿ 2023, 16:58 IST
Last Updated 7 ಫೆಬ್ರುವರಿ 2023, 16:58 IST
-
-   

ಮಥುರಾ: ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು 10 ಕಿ.‌ಮೀ.ನಷ್ಟು ಎಳೆದೊಯ್ದ ಘಟನೆ ಇಲ್ಲಿನ ಯಮುನಾ ಎಕ್ಸ್‌ಪ್ರೆಸ್‌ವೇ ನಲ್ಲಿ ಮಂಗಳವಾರ ನಡೆದಿದೆ.

‘ಘಟನೆಗೆ ಸಂಬಂಧಿಸಿದಂತೆ, ಮಾರುತಿ ಸುಜುಕಿ ಸ್ವಿಫ್ಟ್‌ ಕಾರಿನ ಚಾಲಕ ವೀರೇಂದ್ರ ಸಿಂಗ್‌ ಎಂಬುವವರನ್ನು ವಶಕ್ಕೆ ಪಡೆದು, ಕಾರನ್ನು ಜಪ್ತಿ ಮಾಡಲಾಗಿದೆ’ ಎಂದು ಮಥುರಾ ಗ್ರಾಮೀಣ ಎಸ್ಪಿ ತ್ರಿಗುಣ ಬಿಷನ್ ತಿಳಿಸಿದ್ದಾರೆ.

ಸಿ.ಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಮೃತ ವ್ಯಕ್ತಿಯ ವಯಸ್ಸು 35 ವರ್ಷ ಎಂದು ಅಂದಾಜಿಸಲಾಗಿದೆ. ಆತನ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದೂ ತಿಳಿಸಿದ್ದಾರೆ.

ADVERTISEMENT

ಬಂಧಿತ ಚಾಲಕ ದೆಹಲಿಯ ಸಂಗಮ ವಿಹಾರ್‌ ನಿವಾಸಿ. ಅವರು ಕುಟುಂಬದ ನಾಲ್ವರು ಸದಸ್ಯರೊಂದಿಗೆ ಆಗ್ರಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು, ದೆಹಲಿಗೆ ವಾಪಸಾಗುತ್ತಿದ್ದರು.

‘ಎಕ್ಸ್‌ಪ್ರೆಸ್‌ವೇದಲ್ಲಿನ ಟೋಲ್‌ಪ್ಲಾಜಾದ ಉದ್ಯೋಗಿಯೊಬ್ಬರು ತಿಳಿಸಿದ ನಂತರವಷ್ಟೇ, ತನ್ನ ಕಾರಿನಡಿ ಮೃತದೇಹ ಇರುವ ಕುರಿತು ವೀರೇಂದ್ರ ಸಿಂಗ್‌ಗೆ ಗೊತ್ತಾಗಿದೆ. ನಂತರ ಆ ನೌಕರ ಪೊಲೀಸರಿಗೂ ಮಾಹಿತಿ ನೀಡಿದರು. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ’ ಎಂದು ಎಸ್ಪಿ ಬಿಷನ್ ತಿಳಿಸಿದ್ದಾರೆ.

‘ಎಕ್ಸ್‌ಪ್ರೆಸ್‌ವೇದಲ್ಲಿ 106 ಕಿ.ಮೀ. ಎಂಬ ಗುರುತು ಇರುವ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಹೀಗಾಗಿ, ಆ ಸ್ಥಳದಲ್ಲಿಯೇ ಅಪಘಾತ ಸಂಭವಿಸಿರಬಹುದು. ನಂತರ, ವ್ಯಕ್ತಿಯ ಮೃತದೇಹವು ಕಾರಿನಡಿ ಸಿಲುಕಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದಟ್ಟವಾದ ಮಂಜು ಕವಿದಿತ್ತು. ಹೀಗಾಗಿ, ಕಾರಿನಡಿ ಶವ ಸಿಲುಕಿದ್ದು ನನಗೆ ಕಾಣಿಸಲಿಲ್ಲ’ ಎಂಬುದಾಗಿ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ದೆಹಲಿಯಲ್ಲಿ ಕಳೆದ ಜನವರಿ 1ರಂದು, ಕಾರಿನಡಿ ಸಿಲುಕಿದ್ದ ಯುವತಿಯ ಮೃತದೇಹವನ್ನು ಸುಮಾರು 12 ಕಿ.ಮೀ.ವರೆಗೂ ಎಳೆದೊಯ್ದಿದ್ದ ಘಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.