ADVERTISEMENT

ಪ್ರೀತಿಸಿ ಕೈಕೊಡಲು ಯತ್ನಿಸಿದ ಯುವಕನಿಗೆ ಯುವತಿಯಿಂದಲೇ ಆ್ಯಸಿಡ್ ದಾಳಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 7:41 IST
Last Updated 17 ಜೂನ್ 2019, 7:41 IST
   

ನವದೆಹಲಿ: ಮೂರು ವರ್ಷಗಳಿಂದ ಪ್ರೀತಿಸಿ, ನಂತರ ಮದುವೆಯಾಗದೆ ಕೈಕೊಡಲು ಯತ್ನಿಸಿದ ಯುವಕನಿಗೆ ಆತನ ಪ್ರಿಯತಮೆಯೇ ಆ್ಯಸಿಡ್ ದಾಳಿ ನಡೆಸಿರುವ ಘಟನೆ ನವದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ.

ಜೂನ್ 11ರಂದು ವಿಕಾಸಪುರಿ ಪೊಲೀಸರಿಗೆ ದೂರವಾಣಿ ಕರೆಯೊಂದು ಬಂದಿದೆ. ಕರೆಯಲ್ಲಿ ಯುವಕ ಯುವತಿ ಇಬ್ಬರಿಗೆ ಯಾರೋ ಆ್ಯಸಿಡ್ ದಾಳಿ ನಡೆಸಿದ್ದಾರೆ. ಕೂಡಲೆ ಸ್ಥಳಕ್ಕೆ ಬನ್ನಿ ಎಂದು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ.

ವೈದ್ಯರು ಇದು ಆ್ಯಸಿಡ್ ದಾಳಿ ಎಂಬುದನ್ನು ದೃಢಪಡಿಸಿದರು. ಇವೆಲ್ಲವನ್ನೂ ಗಮನಿಸಿದ ಪೊಲೀಸರು ಇದೆಲ್ಲಾ ಹೇಗಾಯಿತು ಎಂದು ಕೇಳಿದಾಗ ಇಬ್ಬರೂ ಬೈಕ್ ನಲ್ಲಿ ಬರುತ್ತಿದ್ದಾಗ ಯಾರೋ ಈ ರೀತಿ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ.ಆದರೆ, ಆ್ಯಸಿಡ್ ದಾಳಿ ನಡೆಸಿದವರು ಯಾರು ಎಂಬುದು ಪತ್ತೆಯಾಗಲಿಲ್ಲ. ಎರಡು ಮೂರು ದಿನಗಳು ಕಳೆದರೂ ಪೊಲೀಸರಿಗೆ ಆರೋಪಿಯ ಬಗ್ಗೆ ಸುಳಿವೇ ಸಿಗಲಿಲ್ಲ.

ADVERTISEMENT

ನಂತರ ಪೊಲೀಸರು ಇಬ್ಬರಿಂದಲೂ ಹೇಳಿಕೆಗಳನ್ನು ಪಡೆದುಕೊಂಡರು. ಆದರೂ ಆ್ಯಸಿಡ್ ಎರಚಿದವರು ಯಾರು ಎಂಬುದು ಪತ್ತೆಯಾಗಲಿಲ್ಲ. ಆದರೆ, ಯುವತಿಯ ಕೈಗಳಲ್ಲಿ ಮಾತ್ರ ಆ್ಯಸಿಡ್‌‌ನಿಂದಾಗಿ ಗಾಯಗಳಾಗಿವೆ. ಆಕೆಯ ಮುಖಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಯುವಕನಿಗೆ ಮಾತ್ರ ಮುಖ ಸಂಪೂರ್ಣ ಸುಟ್ಟಗಾಯಗಳಾಗಿದ್ದವು. ಕೂಡಲೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದರು.

ಯುವಕ ನೀಡಿದ ಹೇಳಿಕೆಯಲ್ಲಿ, ನಾವು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅಂದು ಇಬ್ಬರೂ ಬೈಕ್‌‌ನಲ್ಲಿ ಹೊರಡುವ ಮುನ್ನ ಮದುವೆಯಾಗುವಂತೆ ಆಕೆ ಕೇಳಿದಳು. ಅದಕ್ಕೆ ನಾನು ಮದುವೆಯ ವಿಚಾರ ಬೇಡ, ನನ್ನನ್ನು ಮರೆತುಬಿಡು, ನಿನ್ನಷ್ಟಕ್ಕೆ ನೀನು ಇದ್ದು ಬಿಡು, ನನ್ನಷ್ಟಕ್ಕೆ ನಾನಿರುತ್ತೇನೆ ಎಂದು ಹೇಳಿದೆ. ಆಗ ಆಕೆ ಸುಮ್ಮನಾದಳು. ಸ್ವಲ್ಪ ಸಮಯದ ನಂತರ ಇಬ್ಬರೂ ಕೊನೆಯದಾಗಿ ಬೈಕ್ ರೈಡ್ ಹೋಗಲು ತೀರ್ಮಾನಿಸಿದೆವು.

ದಾರಿಮಧ್ಯೆ ಆಕೆ ನನ್ನ ಹೆಲ್ಮೆಟ್ ತೆಗೆಯುವಂತೆ ಹೇಳಿದಳು. ನಾನು ತೆಗೆದೆ, ಸ್ವಲ್ಪ ದೂರ ಹೋಗುತ್ತಿದ್ದಂತೆ ಮುಖಕ್ಕೆ ಏನೋ ಎರಚಿದಂತಾಯಿತು. ಮುಂದೆ ಬೈಕ್ ಓಡಿಸಲಾರದೆ ನಿಲ್ಲಿಸಿದೆ. ಅವಳಿಗೂ ಕೈಗಳಲ್ಲಿ ಗಾಯಗಳಾಗಿದ್ದವು. ನಮ್ಮನ್ನು ನೋಡಿದ ದಾರಿಹೋಕರೊಬ್ಬರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು ಎಂದು ಹೇಳಿದ.

ಕೂಡಲೆ ಆರೋಪಿಯ ಜಾಡು ಹಿಡಿದ ಪೊಲೀಸರು ಯುವತಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದರು. ಆಗ ಆಕೆ ನಿಜ ಸಂಗತಿ ಬಾಯಿಬಿಟ್ಟಳು. ನನ್ನನ್ನು ಮೂರು ವರ್ಷ ಪ್ರೀತಿಸಿ, ದೈಹಿಕ ಸಂಪರ್ಕವನ್ನೂ ಬೆಳೆಸಿ ಈಗ ನನ್ನಿಂದ ದೂರ ಇರು ಎಂದು ಹೇಳಿದ. ಅದಕ್ಕೆ ಆತನ ಮುಖಕ್ಕೆ ಶೌಚಾಲಯದಲ್ಲಿ ಬಳಸುವ ಆ್ಯಸಿಡ್ ತೆಗೆದು ಎರಚಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ದೆಹಲಿಯ ಪಶ್ಚಿಮ ವಿಭಾಗದ ಡಿಸಿಪಿ ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.