ADVERTISEMENT

ಮನೆಯಲ್ಲಿ ಕೊಕೇನ್ ಪತ್ತೆ: ನಟ ಅರ್ಮಾನ್ ಕೊಹ್ಲಿ ಬಂಧನ

ನಟನ ಮನೆ ಮೇಲೆ ಎನ್‌ಸಿಬಿ ದಾಳಿ, ಹಲವು ಗಂಟೆಗಳ ಕಾಲ ವಿಚಾರಣೆ

ಪಿಟಿಐ
Published 29 ಆಗಸ್ಟ್ 2021, 13:33 IST
Last Updated 29 ಆಗಸ್ಟ್ 2021, 13:33 IST
ಮುಂಬೈನಲ್ಲಿ ಭಾನುವಾರ ನಟ ಅರ್ಮಾನ್ ಕೊಹ್ಲಿ ಅವರನ್ನು ಮಾದಕ ವಸ್ತು ಪ್ರಕರಣದಲ್ಲಿ ಬಂಧಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು –ಪಿಟಿಐ ಚಿತ್ರ
ಮುಂಬೈನಲ್ಲಿ ಭಾನುವಾರ ನಟ ಅರ್ಮಾನ್ ಕೊಹ್ಲಿ ಅವರನ್ನು ಮಾದಕ ವಸ್ತು ಪ್ರಕರಣದಲ್ಲಿ ಬಂಧಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು –ಪಿಟಿಐ ಚಿತ್ರ   

ಮುಂಬೈ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈ ಮನೆಯಲ್ಲಿ ಕೊಕೇನ್ (ಮಾದಕ ವಸ್ತು) ಪತ್ತೆಯಾದ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಅವರನ್ನು ಭಾನುವಾರ ಮಾದಕ ವಸ್ತು ನಿಯಂತ್ರಣ ಘಟಕವು (ಎನ್‌ಸಿಬಿ) ಬಂಧಿಸಿದೆ.

‘ಕೊಹ್ಲಿ ಅವರ ಮನೆ ಮೇಲೆ ಶನಿವಾರ ಸಂಜೆ ಎನ್‌ಸಿಬಿಯ ತಂಡವು ದಾಳಿ ನಡೆಸಿತ್ತು. ಬಳಿಕ ಅವರನ್ನು ಮುಂಬೈನಲ್ಲಿರುವ ತನ್ನ ಕಚೇರಿಗೆ ಕರೆದೊಯ್ದಿದ ಎನ್‌ಸಿಬಿಯು ಕೆಲಗಂಟೆಗಳ ಕಾಲ ಅವರನ್ನು ವಿಚಾರಣೆಗೊಳಪಡಿಸಿತ್ತು. ಎನ್‌ಡಿಪಿಎಸ್ ಕಾಯ್ದೆ ಅಡಿ ಅವರನ್ನು ಬಂಧಿಸಲಾಗಿದೆ’ ಎಂದು ಎನ್‌ಸಿಬಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅರ್ಮಾನ್ ಅವರ ಬಂಧನ ಸುದ್ದಿಯನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ಎನ್‌ಸಿಬಿಯು ಮಾಧ್ಯಮಗಳಿಗೆ ತಿಳಿಸಿದೆ. ಅರ್ಮಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೋಮವಾರದ ತನಕ ಎನ್‌ಸಿಬಿಯ ವಶಕ್ಕೆ ನೀಡಲಾಗಿದೆ.

ADVERTISEMENT

‘ಅರ್ಮಾನ್ ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಕೊಕೇನ್ ಪತ್ತೆಯಾಗಿದ್ದು, ಇದು ದಕ್ಷಿಣ ಅಮೆರಿಕದ ಮೂಲದ್ದಾಗಿದೆ. ಕಳ್ಳ ಸಾಗಣೆದಾರರ ಮೂಲಕ ಮುಂಬೈಗೆ ಇದನ್ನು ತರಲಾಗಿದ್ದು ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಟ ಗೌರವ್ ದೀಕ್ಷಿತ್ ಹಾಗೂ ಡ್ರಗ್ ಪೆಡ್ಲರ್ ಅಜಯ್ ರಾಜುಸಿಂಗ್ ಅವರನ್ನು ಎನ್‌ಸಿಬಿಯು ಇತ್ತೀಚೆಗೆ ಬಂಧಿಸಿ ವಿಚಾರಣೆಗೊಳಪಡಿಸಿತ್ತು. ಆಗ ಅರ್ಮಾನ್ ಅವರ ಹೆಸರು ಕೇಳಿಬಂದಿತ್ತು’ ಎಂದು ಮೂಲಗಳು ತಿಳಿಸಿವೆ.

ನಟ ಸಲ್ಮಾನ್ ಖಾನ್ ಅಭಿನಯದ ‘ಪ್ರೇಮ್ ರತನ್ ಧನ್ ಪಾಯೊ’ ಸಿನಿಮಾ ಸೇರಿದಂತೆ ಇತರ ಸಿನಿಮಾಗಳಲ್ಲಿ ಅರ್ಮಾನ್ ನಟಿಸಿದ್ದಾರೆ. ಕಿರುತೆರೆಯ ರಿಯಾಲಿಟಿ ಷೋ ‘ಬಿಗ್‌ಬಾಸ್‌’ನಲ್ಲೂ ಅವರು ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.