ಲಖನೌ: ‘ರೈತರನ್ನು ನೇರವಾಗಿ ಎದುರಿಸುವ ಧೈರ್ಯವಿಲ್ಲದೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬೆಳೆ ಹಾನಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.
ಭಾನುವಾರ ಯೋಗಿ ಆದಿತ್ಯನಾಥ ಅವರು ಮೆಕ್ಕೆಜೋಳ ಬೆಳೆಯ ವೈಮಾನಿಕ ಸಮೀಕ್ಷೆ ನಡೆಸಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಯಾದವ್, ‘ಸಮಯದ ಅಭಾವವಲ್ಲ, ರೈತರ ಕೋಪಕ್ಕೆ ಬಲಿಯಾಗಬಹುದೆಂಬ ಭಯದಿಂದ ರೈತರನ್ನು ನೇರವಾಗಿ ಭೇಟಿಯಾಗುವುದನ್ನು ತಪ್ಪಿಸಿದ್ದಾರೆ’ ಎಂದು ಹೇಳಿದ್ದಾರೆ.
‘ಬೆಳೆ ಹಾನಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಲು ಸಮಯದ ಕೊರತೆಯಿಲ್ಲ. ಆದರೆ, ರೈತರ ಕೋಪವನ್ನು ನೆಲದ ಮೇಲೆ ಎದುರಿಸಲು ಅಗತ್ಯವಾದ 'ಧೈರ್ಯ'ದ ಕೊರತೆಯಿದೆ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.
‘ಬಿಡಾಡಿ ದನಗಳ ಹಾವಳಿಯಿಂದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಡಾಡಿ ದನಗಳನ್ನು ಅಷ್ಟು ಎತ್ತರದಿಂದ ನೋಡಲು ಸಾಧ್ಯವೇ ಎಂದು ರೈತರು ಕೇಳುತ್ತಿದ್ದಾರೆ’ ಎಂದಿದ್ದಾರೆ.
ಅಕಾಲಿಕ ಮಳೆ ಮತ್ತು ಬೀದಿ ದನಗಳ ಹಾವಳಿಯಿಂದಾಗಿ ಉಂಟಾಗುತ್ತಿರುವ ಬೆಳೆ ಹಾನಿಯ ಬಗ್ಗೆ ರೈತರಿಂದ ಅನೇಕ ದೂರುಗಳು ಬಂದಿವೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.