ADVERTISEMENT

ವಿವಾಹ ಬಾಹಿರ ಸಂಬಂಧ ಅಪರಾಧವಲ್ಲ; ಸೆಕ್ಷನ್‌ 497 ಅಸಾಂವಿಧಾನಿಕ: ಸುಪ್ರೀಂ

ಏಜೆನ್ಸೀಸ್
Published 27 ಸೆಪ್ಟೆಂಬರ್ 2018, 7:00 IST
Last Updated 27 ಸೆಪ್ಟೆಂಬರ್ 2018, 7:00 IST
   

ನವದೆಹಲಿ:ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 497ನೇ ಸೆಕ್ಷನ್‌ ಏಕಪಕ್ಷೀಯವಾಗಿದ್ದು ಇದರಿಂದಾಗಿ ವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್‌, ಸೆಕ್ಷನ್‌ 497 ಅಸಾಂವಿಧಾನಿಕ ಎಂದು ಗುರುವಾರ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಆಗಸ್ಟ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು. ಹೆಂಡತಿಯು ಗಂಡನ ಸ್ವತ್ತಲ್ಲ, ಪ್ರಾಣಾಪಾಯ ತರದ ಹೊರತು ವಿವಾಹ ಬಾಹಿರ ಸಂಬಂಧವನ್ನು ಅಪರಾಧವಾಗಿ ಪರಿಗಣಿಸಲಾಗದು ಎನ್ನುವ ಮೂಲಕ 150 ವರ್ಷಗಳ ಹಳೆಯ ಕಾನೂನು ಅಸಾಂವಿಧಾನಿಕ ಎಂದು ಕೋರ್ಟ್‌ ಹೇಳಿದೆ.

ಚೀನಾ, ಜಪಾನ್‌, ಬ್ರೆಜಿಲ್‌ನಲ್ಲಿ ಇದೊಂದು ಅಪರಾಧವಲ್ಲ ಹಾಗೂ ಅನೇಕ ರಾಷ್ಟ್ರಗಳು ಇದನ್ನು ಅಪರಾಧಮುಕ್ತಗೊಳಿಸಿವೆ. ವಿವಾಹ ಬಾಹಿರ ಸಂಬಂಧ ಅತ್ಯಂತ ಖಾಸಗಿ ವಿಚಾರವಾಗಿದ್ದು, ಇದನ್ನು ಅಪರಾಧವಾಗಿ ಪರಿಗಣಿಸುವುದರಿಂದ ಖಾಸಗಿ ವಿಚಾರಕ್ಕೆ ಅಡ್ಡಿ ಉಂಟುಮಾಡಿದಂತೆ ಆಗುತ್ತದೆ. ಮಹಿಳೆಯನ್ನು ಅಸಮಾನತೆಯಿಂದ ಕಾಣುವ ಯಾವುದೂ ಸಾಂವಿಧಾನಿಕವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯ ಪಟ್ಟರು.

ADVERTISEMENT

‘ವಿವಾಹದಲ್ಲಿ ಅತೃಪ್ತಿಯೇ ವಿವಾಹ ಬಾಹಿರ ಸಂಬಂಧ ಸೃಷ್ಟಿಗೆ ಕಾರಣವಾಗದಿರಬಹುದು, ಅಸಂತುಷ್ಟ ವಿವಾಹವೇ ಇದಕ್ಕೆ ಕಾರಣವಾಗಬಹುದು.’ ಸೆಕ್ಷನ್‌ 497ರಲ್ಲಿ ಮಾತ್ರವೇ ಮಹಿಳೆ ಮತ್ತು ಪುರುಷನನ್ನು ಪ್ರತ್ಯೇಕವಾಗಿ ಕಾಣುತ್ತದೆ. ವಿವಾಹಿತ ಮಹಿಳೆಯನ್ನು ಪತಿಯ ಸ್ವತ್ತಿನಂತೆ ಇಲ್ಲಿ ಕಾಣಲಾಗುತ್ತಿದೆ ಎಂದು ಹೇಳಿದರು.

(ಅರ್ಜಿದಾರರ ಪರ ವಕೀಲ ಕಳೀಶ್ವರಂ ರಾಜ್‌ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿವರಿಸಿದರು)

ಐಪಿಸಿ 497ನೇ ಸೆಕ್ಷನ್‌ ಅನ್ನು ಪ್ರಶ್ನಿಸಿ ಜೋಸೆಫ್‌ ಶೈನ್‌ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸಂವಿಧಾನ ಪೀಠ ನಡೆಸಿತ್ತು.ವೈವಾಹಿಕ ಬಂಧದ ಪಾವಿತ್ರ್ಯ ಕಾಪಾಡಲು ವ್ಯಭಿಚಾರಕ್ಕೆಶಿಕ್ಷೆ ವಿಧಿಸುವ ಕಾನೂನು ಅಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಐಪಿಸಿ ಸೆಕ್ಷನ್‌ 497 ಏನು ಹೇಳುತ್ತದೆ?

ಮತ್ತೊಬ್ಬರ ಹೆಂಡತಿಯ ಜತೆಗೆ ಆತನ ಸಹಮತ ಇಲ್ಲದೆ ಲೈಂಗಿಕ ಸಂಪರ್ಕ ನಡೆಸುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು. ಆದರೆ ಇದು ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕೆ ಐದು ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶ ಇದೆ. ಇಂತಹ ಪ್ರಕರಣದಲ್ಲಿ ಹೆಂಡತಿಗೆ ಶಿಕ್ಷೆ ಕೊಡಲು ಅವಕಾಶ ಇಲ್ಲ ಎಂದು ಸೆಕ್ಷನ್‌ 497 ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.